ಈಡನ್ ಗಾರ್ಡನ್ಸ್‌ನಲ್ಲಿ ಲಕ್ಷ್ಮಣ್ ಗಳಿಸಿದ 281ರನ್ ಶತಮಾನದ ಬೆಸ್ಟ್ ಇನಿಂಗ್ಸ್

Update: 2016-08-27 17:25 GMT

ಮುಂಬೈ, ಆ.27: ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ 2001ರಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ದಾಖಲಿಸಿದ್ದ 281 ರನ್ ಶತಮಾನದಲ್ಲಿ ದಾಖಲಾದ ಅತ್ಯುತ್ತಮ ಇನಿಂಗ್ಸ್ ಆಗಿ ಗುರುತಿಸಿಕೊಂಡಿದೆ.

ಜನವರಿ 2000 ರಿಂದ ಹಲವು ಮಂದಿ ಬ್ಯಾಟ್ಸ್‌ಮನ್‌ಗಳ ದಾಖಲಿಸಿದ್ದ ಸ್ಮರಣಿಯ ಇನಿಂಗ್ಸ್‌ಗಳನ್ನು ಪರಿಗಣಿಸಲಾಗಿತ್ತು. ಇದರಲ್ಲಿ 37 ಮಂದಿ ಸದಸ್ಯರ ಸಮಿತಿಯು 2000 ಜನವರಿ 1ರಿಂದ ಇನಿಂಗ್ಸ್‌ಗಳನ್ನು ಆಯ್ಕೆಮಾಡಿತ್ತು. ಈ ಪೈಕಿ ಲಕ್ಷ್ಮಣ್ 2001, ಮಾರ್ಚ್ 11ರಿಂದ 15ರ ತನಕ ನಡೆದ ಎರಡನೆ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದರು.
 631 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ತಳವೂರಿದ್ದ ಲಕ್ಷ್ಮಣ್ 452 ಎಸೆತಗಳನ್ನು ಎದುರಿಸಿ 44 ಬೌಂಡರಿಗಳ ಸಹಾಯದಿಂದ 281 ರನ್ ದಾಖಲಿಸಿದ್ದರು. ಭಾರತ ಈ ಟೆಸ್ಟ್‌ನಲ್ಲಿ ಫಾಲೋಆನ್‌ಗೆ ಒಳಗಾಗಿದ್ದರೂ, ಅನಂತರ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅವರ ಶತಕದ ನೆರವಿನಲ್ಲಿ ಭಾರತ ಚೇತರಿಸಿಕೊಂಡು ಗೆಲುವು ದಾಖಲಿಸಿತ್ತು.

ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ಹರ್ಭಜನ್ ಪ್ರಹಾರದ ನಡುವೆಯೂ 131.5 ಓವರ್‌ಗಳಲ್ಲಿ 445 ರನ್‌ಗಳಿಗೆ ಆಲೌಟಾಗಿತ್ತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಗ್ಲೆನ್ ಮೆಗ್ರಾತ್(18ಕ್ಕೆ4) ಗಿಲ್ಲೆಸ್ಪಿ (47ಕ್ಕೆ 2), ಕಾಸ್ಪ್ರೊವಿಝ್(39ಕ್ಕೆ2) ಮತ್ತು ವಾರ್ನೆ (65ಕ್ಕೆ 2) ದಾಳಿಗೆ ಸಿಲುಕಿ 58.1 ಓವರ್‌ಗಳಲ್ಲಿ 171 ರನ್ ಗಳಿಗೆ ಆಲೌಟಾಗಿತ್ತು. ಲಕ್ಷ್ಮಣ್ 59 ರನ್‌ಗಳ ಕೊಡುಗೆ ನೀಡಿದ್ದರು.

274 ರನ್‌ಗಳ ಹಿನ್ನಡೆ ಅನುಭವಿಸಿದ ಭಾರತ ಫಾಲೋಆನ್ ಅನುಭವಿಸಿ ಎರಡನೆ ಇನಿಂಗ್ಸ್ ಆಡುವ ಅವಕಾಶ ಪಡೆದಿತ್ತು. ಭಾರತವನ್ನು ಎರಡನೆ  ಇನಿಂಗ್ಸ್‌ನಲ್ಲಿ ಬೇಗನೆ ಕಟ್ಟಿಹಾಕುವ ಆಸ್ಟ್ರೇಲಿಯದ ನಾಯಕ ಸ್ಟೀವ್ ವಾ ಕನಸು ನನಸಾಗಲಿಲ್ಲ. ಭಾರತ ಎರಡನೆ ಇನಿಂಗ್ಸ್‌ನಲ್ಲಿ ಭಾರತ 737 ನಿಮಿಷಗಳ ಬ್ಯಾಟಿಂಗ್‌ನಲ್ಲಿ 178 ಓವರ್‌ಗಳಲ್ಲಿ 657 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಭಾರತದ ಪರ ರಾಹುಲ್ ದ್ರಾವಿಡ್ 180 ರನ್, ನಾಯಕ ಸೌರವ್ ಗಂಗುಲಿ 48 ರನ್, ದಾಸ್ 39 ರನ್, ಎಸ್.ರಮೇಶ್ 30 ರನ್, ಸಚಿನ್ ತೆಂಡುಲ್ಕರ್ 10 ರನ್., ಝಹೀರ್ ಖಾನ್ ಔಟಾಗದೆ 23 ರನ್ ಮತ್ತು ಹರ್ಭಜನ್ ಸಿಂಗ್ ಔಟಾಗದೆ 8 ರನ್ ಗಳಿಸಿದ್ದರು.
115ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ನಾಲ್ಕನೆ ವಿಕೆಟ್‌ಗೆ ಲಕ್ಷ್ಮಣ್ ಮತ್ತು ನಾಯಕ ಗಂಗುಲಿ 117ರನ್ ಮತ್ತು ಐದನೆ ವಿಕೆಟ್‌ಗೆ ದ್ರಾವಿಡ್ ಮತ್ತು ಲಕ್ಷ್ಮಣ್ 376 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 650ರ ಗಡಿ ದಾಟಲು ನೆರವಾಗಿದ್ದರು.
ಇದರೊಂದಿಗೆ ಭಾರತ ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 384 ರನ್‌ಗಳ ಸವಾಲನ್ನು ಆಸ್ಟ್ರೇಲಿಯಕ್ಕೆ ವಿಧಿಸಿತ್ತು. ಆದರೆ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ಹರ್ಭಜನ್ ಸಿಂಗ್ (73ಕ್ಕೆ6) ಮತ್ತು ಸಚಿನ್ ತೆಂಡುಲ್ಕರ್(31ಕ್ಕೆ 3) ದಾಳಿಗೆ ತತ್ತರಿಸಿ 68.3 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟಾಗಿತ್ತು. ಇದರೊಂದಿಗೆ 171 ರನ್‌ಗಳ ಸೋಲು ಅನುಭವಿಸಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ ಎಷ್ಟು ರನ್ಗಳಿಸಿತ್ತೋ ಅಷ್ಟೇ ಅಂತರದಲ್ಲಿ ಆಸ್ಟ್ರೇಲಿಯ ಸೋಲು ಅನುಭವಿಸಿತ್ತು.
ಲಕ್ಷ್ಮಣ್ ಮೊದಲ  ಇನಿಂಗ್ಸ್‌ನಲ್ಲಿ ನಂ.3 ಕ್ರಮಾಂಕದಲ್ಲಿ ಭಡ್ತಿ ಪಡೆದು ಕ್ರೀಸ್‌ಗೆ ಆಗಮಿಸಿ ಅರ್ಧಶತಕ ದಾಖಲಿಸಿದ್ದರು. ಎರಡನೆ  ಇನಿಂಗ್ಸ್‌ನಲ್ಲಿ ಭಾರತ 16.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 52 ರನ್ ಗಳಿಸಿದ್ದಾಗ ಕ್ರೀಸ್‌ಗೆ ಆಗಮಿಸಿದ್ದರು .ಆದರೆ ಅವರು ತಂಡದ ಸ್ಕೋರ್ 608 ರನ್ ತಲುಪುವತನಕ ಕ್ರೀಸ್‌ನಲ್ಲಿ ಆಸ್ಟ್ರೇಲಿಯದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News