ದುಲೀಪ್ ಟ್ರೋಫಿ:ಇಂಡಿಯಾ ಬ್ಲೂ ತಂಡಕ್ಕೆ ಮೊದಲ ದಿನದ ಗೌರವ
ಗ್ರೇಟರ್ ನೊಯ್ಡ, ಆ.29: ದುಲೀಪ್ ಟ್ರೋಫಿಯ ಎರಡನೆ ಪಂದ್ಯ ಸೋಮವಾರ ಇಲ್ಲಿ ಆರಂಭವಾಗಿದ್ದು, ಮಳೆಬಾಧಿತ ಮೊದಲ ದಿನದಾಟದಲ್ಲಿ ಇಂಡಿಯಾ ಬ್ಲೂ ತಂಡ ವಿಕೆಟ್ ನಷ್ಟವಿಲ್ಲದೆ 105 ರನ್ ಗಳಿಸಿದೆ.
ಬ್ಲೂ ತಂಡದ ನಾಯಕ ಗಂಭೀರ್(51 ರನ್) ಯುವರಾಜ್ ಸಿಂಗ್ ನಾಯಕತ್ವದ ಇಂಡಿಯಾ ರೆಡ್ ತಂಡದ ವಿರುದ್ಧ 61ನೆ ಪ್ರಥಮ ದರ್ಜೆ ಅರ್ಧಶತಕ ಬಾರಿಸಿದರು. ಕರ್ನಾಟಕದ ಬ್ಯಾಟ್ಸ್‌ಮನ್ ಮಯಾಂಕ್ ಅಗರವಾಲ್(53) ಅವರೊಂದಿಗೆ ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 105 ರನ್ ಸೇರಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದರು.
ಇಂಡಿಯಾ ರೆಡ್ ವೇಗದ ಬೌಲರ್‌ಗಳಾದ ನಾಥು ಸಿಂಗ್, ಪ್ರದೀಪ್ ಸಾಂಗ್ವಾನ್ ಹಾಗೂ ಈಶ್ವರ್ ಪಾಂಡೆ ಪರಿಸ್ಥಿತಿಯ ಲಾಭ ಪಡೆಯಲು ವಿಫಲರಾದರು.
ಇಂಡಿಯಾ ಗ್ರೀನ್ ವಿರುದ್ಧದ ಮೊದಲ ಪಂದ್ಯದಲ್ಲಿ 120 ರನ್‌ಗೆ 9 ವಿಕೆಟ್‌ಗಳ ಉಡಾಯಿಸಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಲೈನ್ ಹಾಗೂ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಲು ಪರದಾಟ ನಡೆಸಿದರು.
30 ನಿಮಿಷಗಳ ಆಟದ ಬಳಿಕ ಮೋಡ ಕವಿದ ವಾತಾವರಣದಲ್ಲಿ ಯುವರಾಜ್ ಅವರು ಈಶ್ವರ್ ಪಾಂಡೆಯನ್ನು ಕಣಕ್ಕಿಳಿಸಿದರೂ ಪಿಚ್‌ನ ಲಾಭ ಪಡೆಯಲು ವಿಫಲರಾದರು. ಭೋಜನ ವಿರಾಮಕ್ಕೆ ಮೊದಲು ಗಂಭೀರ್ ರನೌಟಾಗುವುದರಿಂದ ಬಚಾವಾದರು. ಟೀ ವಿರಾಮದ ಬಳಿಕ ಫ್ಲಡ್‌ಲೈಟ್‌ನಲ್ಲಿ ಆಟ ಮುಂದುವರಿದಾಗ ಮಳೆ ಸುರಿಯಲಾರಂಭಿಸಿತು. ಮಳೆಯಿಂದಾಗಿ ಪಂದ್ಯ ಮುಂದುವರಿಯಲಿಲ್ಲ.