×
Ad

ತ್ರಿಪುರಾದಲ್ಲಿ ಉದಯಿಸಿದ ಮತ್ತೊಂದು ದೀಪಾ!

Update: 2016-08-29 23:42 IST

ಅಗರ್ತಲ, ಆ.29: ದೀಪಾ ಕರ್ಮಾಕರ್‌ರಂತಹ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಪಟುವನ್ನು ದೇಶಕ್ಕೆ ಕೊಡುಗೆ ನೀಡಿದ ತ್ರಿಪುರಾದಲ್ಲಿ ಜೂನಿಯರ್ ದೀಪಾ ಉದಯಿಸಿದೆ. ಈಕೆ ಕೂಡ ದೀಪಾರಂತೆಯೇ ಬಡ ಕುಟುಂಬದಿಂದ ಬಂದವಳು. ಆಕೆಯೇ 15ರ ಹರೆಯದ ಅಶ್ಮಿತಾ. ಮುಂದಿನ ದಿನಗಳಲ್ಲಿ ದೇಶಕ್ಕೆ ಮತ್ತೊಂದು ದೀಪಾ ಲಭಿಸಬೇಕಾದರೆ, ಅಶ್ಮಿತಾಗೆ ಪ್ರೋತ್ಸಾಹಿಸುವ ಅಗತ್ಯವಿದೆ.

ಅಶ್ಮಿತಾರ ತಂದೆ ದಿನಗೂಲಿ, ತಾಯಿ ಮನೆಗೆಲಸ ಮಾಡಿ ದಿನ ಕಳೆಯುತ್ತಿದ್ದಾರೆ. ಆದರೆ,ಅಶ್ಮಿತಾ ಈಗಾಗಲೇ ಚಾಂಪಿಯನ್ ಆಗಿದ್ದಾರೆ. ಟರ್ಕಿಯಲ್ಲಿ ನಡೆದ ವರ್ಲ್ಡ್ ಸ್ಕೂಲ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅಶ್ಮಿತಾರನ್ನು ಮುಂದಿನ ದೀಪಾ ಕರ್ಮಾಕರ್ ಎಂದು ಅಗರ್ತಲದ ಜಿಮ್ನಾಸ್ಟಿಕ್ ಸಮುದಾಯ ಗುರುತಿಸಿದೆ.

ದೀಪಾ ಜಿಮ್ನಾಸ್ಟಿಕ್‌ನ ಅಕ್ಷರಗಳನ್ನು ಕಲಿತ ವಿವೇಕಾನಂದ ಬ್ಯಾಮಘರ್‌ನಲ್ಲಿ ಅಶ್ಮಿತಾ ಅಭ್ಯಾಸ ನಡೆಯುತ್ತಿದ್ದಾರೆ. ಈ ಹಿಂದೆ ದೀಪಾಗೆ ಕೋಚ್ ನೀಡಿದ್ದ ಸೋಮ ನಂದಿ ಅಶ್ಮಿತಾಗೂ ಕೋಚಿಂಗ್ ನೀಡುತ್ತಿದ್ದಾರೆ.

 ಶ್ರೇಷ್ಠ ಜಿಮ್ನಾಸ್ಟಿಕ್ ಆಗಬೇಕಾದರೆ ಉತ್ತಮ ಶಕ್ತಿ, ವೇಗ ಹಾಗೂ ನಮ್ಯತೆಯ (ಬಾಗಿಸುವಿಕೆ)ಅಗತ್ಯವಿದೆ. ಅಶ್ಮಿತಾಗೆ ಈ ಮೂರೂ ಗುಣಗಳಿವೆ. ಹೀಗಾಗಿ ಆಕೆಯ ಪ್ರದರ್ಶನ ಇತರ ಎಲ್ಲ ಮಕ್ಕಳಿಗಿಂತ ಉತ್ತಮವಾಗಿದೆ ಎಂದು ಸೋಮ ನಂದಿ ಹೇಳಿದ್ದಾರೆ.

ಅಶ್ಮಿತಾ ಅಗರ್ತಲದಲ್ಲಿ ಚಿಕ್ಕ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಸಣ್ಣ ಕೊಠಡಿಯಲ್ಲಿ ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಅಶ್ಮಿತಾರ ಹೆತ್ತವರಿಗೆ ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಆಕೆಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿ ಹುರಿದುಂಬಿಸುತ್ತಿದ್ದಾರೆ.

ಬಡತನದಿಂದಾಗಿ ಅಶ್ಮಿತಾಗೆ ಪೋಷ್ಠಿಕಾಂಶದ ಕೊರತೆ ಎದುರಿಸುತ್ತಿದ್ದಾರೆ. ಆಕೆಗೆ ಮೊಟ್ಟೆ ತಿನ್ನುವುದು ದುಬಾರಿಯಾಗಿ ಪರಿಣಮಿಸಿದೆ. ಈ ಎಲ್ಲ ಅಡೆತಡೆಗಳ ನಡುವೆಯೂ ರಾಷ್ಟ್ರೀಯ ಶಾಲಾ ಕ್ರೀಡಾಕೂಟ ಹಾಗೂ ಸಬ್-ಜೂನಿಯರ್ ನ್ಯಾಶನಲ್ ಟೂರ್ನಿಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಜಯಿಸಿ ಗಮನ ಸೆಳೆದಿದ್ದಾರೆ.

 ‘‘ನನ್ನ ಮಗಳನ್ನು ಶ್ರೇಷ್ಠ ಜಿಮ್ನಾಸ್ಟಿಕ್ ಆಗಿ ಬೆಳೆಸಬೇಕೆಂಬ ಬಯಕೆಯಿದೆ.ಆದರೆ, ಆಕೆಯ ಹೆಚ್ಚಿನ ಬಯಕೆಯನ್ನು ಈಡೇರಿಸಲು ನಮಗೆ ಸಾಧ್ಯವಾಗುತ್ತಿಲ್ಲ’’ ಎಂದು ಅತಿಯಾದ ರಕ್ತದ ಒತ್ತಡದಿಂದ ಬಳಲುತ್ತಿರುವ ಅಶ್ಮಿತಾರ ತಂದೆ ಅರುಣ್ ಪಾಲ್ ಹೇಳಿದ್ದಾರೆ. ಯುವ ಜಿಮ್ನಾಸ್ಟಿಕ್ ತಾರೆ ಅಶ್ಮಿತಾ ಜೀವನದಲ್ಲಿ ಸ್ಪಷ್ಟ ಗುರಿ ನಿಗದಿಪಡಿಸಿದ್ದಾರೆ. ‘‘ಮುಂದಿನ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ತಾನು ಬಯಸಿದ್ದೇನೆ. ದೀಪಾ ದೀದಿ ಯಾವಾಗಲೂ ಅಭ್ಯಾಸ ಮಾಡುತ್ತಿರುತ್ತಾರೆ. ನನಗೂ ಅಭ್ಯಾಸ ಮಾಡುವಂತೆ ಹೇಳುತ್ತಾರೆ’’ ಎಂದು ಅಶ್ಮಿತಾ ಹೇಳಿದ್ದಾರೆ.

ಅಶ್ಮಿತಾ ಕಠಿಣ ಅಭ್ಯಾಸವನ್ನು ನಡೆಸಿದರೆ, ಆಕೆಗೆ ತನ್ನಿಂದ ಸಾಧ್ಯವಾದ ಬೆಂಬಲ ನೀಡುವೆ ಎಂದು ದೀಪಾ ಕರ್ಮಾಕರ್ ಭರವಸೆ ನೀಡಿದ್ದಾರೆ. ‘‘ಅಶ್ಮಿತಾಗೆ ಇಡೀ ದೇಶದ ಬೆಂಬಲದ ಅಗತ್ಯವಿದೆ. ಅಶ್ಮಿತಾರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ಆಕೆ ಯಾವ ಪೂರಕ ಆಹಾರ ತಿನ್ನಬೇಕೋ ಅದನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ’’ ಎಂದು ಕೋಚ್ ಸೋಮ ನಂದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News