ಯುಎಸ್ ಓಪನ್‌; ಜೊಕೊವಿಕ್, ನಡಾಲ್, ಕೆರ್ಬರ್ ಶುಭಾರಂಭ

Update: 2016-08-30 17:35 GMT

 ನ್ಯೂಯಾರ್ಕ್, ಆ.30: ಯುಎಸ್ ಓಪನ್‌ನಲ್ಲಿ ವಿಶ್ವದ ನಂ.1 ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್, ಸ್ಪೇನ್ ನಾಲ್ಕನೆ ಶ್ರೇಯಾಂಕದ ರಫೆಲ್ ನಡಾಲ್ ಮತ್ತು ನಂ.2 ಮಹಿಳಾ ಆಟಗಾರ್ತಿ ಜರ್ಮನಿಯ ಏಂಜಲಿಕ್ ಕೆರ್ಬರ್ ಗೆಲುವಿನ ಶುಭಾರಂಭ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಅವರು ಪೋಲೆಂಡ್‌ನ ಜೆರ್ಝಿ ಜಾನೊವಿಝ್ ವಿರುದ್ಧ ಜಯ ಗಳಿಸಿ ಎರಡನೆ ಸುತ್ತು ತಲುಪಿದ್ದಾರೆ. ಜೊಕೊವಿಕ್ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದರೂ ಎದುರಾಳಿಗೆ ಗೆಲುವು ನಿರಾಕರಿಸಿದರು.
ಜಾನೊವಿಜ್ ವಿರುದ್ಧ ಜೊಕೊವಿಕ್ 6-3, 5-7, 6-2, 6-1 ಅಂತರದಲ್ಲಿ ಜಯ ಗಳಿಸಿದರು.
ಮೊದಲ ಸುತ್ತಿನಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರೂ ಬಳಿಕ ಚೇತರಿಸಿಕೊಂಡು ಆಡಿ ಜಯ ದಾಖಲಿಸಿದರು.
ಸ್ಪೇನ್‌ನ ನಾಲ್ಕನೆ ಶ್ರೇಯಾಂಕದ ರಫೇಲ್ ನಡಾಲ್ ಅವರು ಉಜ್ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್ ವಿರುದ್ಧ 6-1,6-4,6-2 ಅಂತರದಿಂದ ಜಯ ಗಳಿಸಿದರು.
ಜರ್ಮನಿಯ ನಂ.2 ಏಂಜೆಲಿಕೊ ಕೆರ್ಬರ್ ಅವರು ಸ್ಲೋವೆನಿಯಾದ ಪೊಲೊನಾ ಹೆರ್‌ಕಾಗ್ ವಿರುದ್ಧ 6-0, 1-0 ಅಂತರದಲ್ಲಿ ಜಯ ಸಾಧಿಸಿದ್ದಾರೆ. ಪೊಲೊನಾ ಗಾಯಗೊಂಡು ಕೆರ್ಬರ್‌ಗೆ ಎದುರು ಸೋಲೊಪ್ಪಿಕೊಂಡರು.
   ಜೊಕೊವಿಕ್ ಎರಡನೆ ಸುತ್ತಿನಲ್ಲಿ ಜಿರಿ ವೆಸೆಲೈ ಅವರನ್ನು ಎದುರಿಸಲಿದ್ದಾರೆ. ಮಾಂಟೊ ಕಾರ್ಲೊ ಟೂರ್ನಿಯಲ್ಲಿ ಜೊಕೊವಿಕ್ ಅವರು ಜಿರಿಗೆ ಶರಣಾಗಿದ್ದರು. ಈ ಕಾರಣದಿಂದಾಗಿ ಇವರ ನಡುವಿನ ಎರಡನೆ ಸುತ್ತಿನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ.
  20ನೆ ಶ್ರೇಯಾಂಕದ ಅಮೆರಿಕದ ಜಾನ್ ಇಸ್ನೇರ್ ಅವರು ತನ್ನ ತಂಡದ 18ರ ಹರೆಯದ ಫ್ರಾನ್ಸಿಸ್ ಟಿಯಾಫೋ ವಿರುದ್ಧ 3-6, 4-6, 7-6(7-5), 6-2, 7-6(7-3) ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಬ್ರಿಟನ್‌ನ ಕೈಲ್ ಎಡ್ಮಂಡ್ ಅವರು ಫ್ರಾನ್ಸ್‌ನ 13ನೆ ಶ್ರೇಯಾಂಕದ ರಿಚರ್ಡ್ ಗ್ಯಾಸ್ಕೂಟ್‌ಗೆ 6-2, 6-2, 6-3 ಅಂತರದಲ್ಲಿ ಆಘಾತ ನೀಡಿದರು.
 ಮೂರನೆ ಶ್ರೇಯಾಂಕದ ಆಟಗಾರ್ತಿ ಸ್ಪೇನ್‌ನ ಗಾರ್ಬೈನ್ ಮುಗುರುಝಾ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ವಿರುದ್ಧ 2-6, 6-0, 6-3 ಅಂತರದಲ್ಲಿ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News