ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಗರಿಷ್ಠ ಸ್ಕೋರ್ ವಿಶ್ವ ದಾಖಲೆ

Update: 2016-08-30 18:03 GMT

 ನಾಟಿಂಗ್‌ಹ್ಯಾಮ್, ಆ.30: ಪಾಕಿಸ್ತಾನ ವಿರುದ್ಧ ಇಲ್ಲಿ ಮಂಗಳವಾರ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 444 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿದೆ.

ಟ್ರೆಂಟ್‌ಬ್ರಿಡ್ಜ್‌ನಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ಗೆ ಆರಂಭಿಕ ದಾಂಡಿಗ ಅಲೆಕ್ಸ್ ಹೇಲ್ಸ್ 171ರನ್(122 ಎಸೆತ, 22 ಬೌಂಡರಿ, 4 ಸಿಕ್ಸರ್), ರೂಟ್ 85, ಜೋ ಬಟ್ಲರ್ ಔಟಾಗದೆ 90 ಹಾಗೂ ನಾಯಕ ಇಯಾನ್ ಮೊರ್ಗನ್ ಔಟಾಗದೆ 57 ರನ್ ಗಳಿಸಿ ತಂಡದ ಸ್ಕೋರ್‌ನ್ನು ಏರಿಸಿದರು.

ಇದರೊಂದಿಗೆ ಇಂಗ್ಲೆಂಡ್ 2006ರಲ್ಲಿ ಹಾಲೆಂಡ್ ವಿರುದ್ಧ ಶ್ರೀಲಂಕಾ(443/2) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿತು. 2015ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕ ತಂಡ 2 ವಿಕೆಟ್ ನಷ್ಟದಲ್ಲಿ 439 ರನ್ ಗಳಿಸಿತ್ತು. ಇದು ಟೆಸ್ಟ್ ಆಡುವ ದೇಶಗಳು ದಾಖಲಿಸಿದ ಗರಿಷ್ಠ ಸ್ಕೋರಾಗಿತ್ತು.

ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್‌ನ ರಾಬಿನ್ ಸ್ಮಿತ್‌ರ(167ರನ್) 23 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ಸ್ಮಿತ್ ಆಸ್ಟ್ರೇಲಿಯದ ವಿರುದ್ಧ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

ಜೋ ಬಟ್ಲರ್ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇಂಗ್ಲೆಂಡ್‌ಗೆ 2ನೆ ಬಾರಿ 400 ರನ್ ದಾಖಲಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News