2018ರ ವಿಶ್ವಕಪ್ ಬಳಿಕ ವಿದಾಯ: ವೇಯ್ನ ರೂನಿ

Update: 2016-08-30 18:05 GMT

ಲಂಡನ್, ಆ.30: ‘‘ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್ ನಾನು ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಟೂರ್ನಿಯಾಗಿರಲಿದೆ’’ ಎಂದು ಇಂಗ್ಲೆಂಡ್ ನಾಯಕ ವೇಯ್ನೆ ರೂನಿ ಮಂಗಳವಾರ ಘೋಷಿಸಿದ್ದಾರೆ.

‘‘ಇಂಗ್ಲೆಂಡ್‌ನ ಪರ ಏನೇ ಮಾಡುವುದಾದರೂ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್ ನನಗೆ ಕೊನೆಯ ಅವಕಾಶವೆಂದು ಭಾವಿಸಿರುವೆ. ನಿವೃತ್ತಿಗೆ ಮಾನಸಿಕವಾಗಿ ಸಿದ್ಧವಾಗಿರುವೆ. ಮುಂಬರುವ ಫಿಫಾ ವಿಶ್ವಕಪ್ ನನ್ನ ಕೊನೆಯ ಟೂರ್ನಿಯಾಗಿದೆ’’ ಎಂದು ಸೆಂಟ್ರಲ್ ಇಂಗ್ಲೆಂಡ್‌ನ ಬರ್ಟನ್‌ನಲ್ಲಿರುವ ಸೈಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೂನಿ ತಿಳಿಸಿದ್ದಾರೆ.

ರವಿವಾರ ಸ್ಲೋವಾಕಿಯದಲ್ಲಿ ಆರಂಭವಾಗಲಿರುವ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 30ರ ಪ್ರಾಯದ ರೂನಿ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಇಂಗ್ಲೆಂಡ್‌ನ ನೂತನ ಕೋಚ್ ಸ್ಯಾಮ್ ಅಲ್ಲಾರ್ಡಿ ಸೋಮವಾರ ತಿಳಿಸಿದ್ದರು.

ಮ್ಯಾಂಚೆಸ್ಟರ್ ಯುನೈಟೆಡ್‌ನ ಸ್ಟ್ರೈಕರ್ ರೂನಿ ಇಂಗ್ಲೆಂಡ್‌ನ ಪರ 116ನೆ ಪಂದ್ಯ ಆಡುವುದರೊಂದಿಗೆ ದೇಶದ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನಾಡಿರುವ ಡೇವಿಡ್ ಬೆಕ್‌ಹ್ಯಾಮ್ ದಾಖಲೆಯನ್ನು ಸರಿಗಟ್ಟಲು ಎದುರು ನೋಡುತ್ತಿದ್ದಾರೆ. 2014ರ ಆಗಸ್ಟ್‌ನಲ್ಲಿ ನಾಯಕನಾಗಿ ಆಯ್ಕೆಯಾಗಿದ್ದ ರೂನಿ ಒಟ್ಟು 53 ಗೋಲುಗಳನ್ನು ಬಾರಿಸಿ ಇಂಗ್ಲೆಂಡ್‌ನ ಪರ ದಾಖಲೆ ಬರೆದಿದ್ದಾರೆ.

 ರೂನಿ ಆರು ಪ್ರಮುಖ ಟೂರ್ನಿಗಳಲ್ಲಿ ಇಂಗ್ಲೆಂಡ್‌ನ್ನು ಪ್ರತಿನಿಧಿಸಿದ್ದರೂ ಕ್ವಾರ್ಟರ್‌ಫೈನಲ್ ದಾಟಲು ವಿಫಲರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಬ್ರೆಝಿಲ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಗ್ರೂಪ್ ಹಂತದಲ್ಲೇ ಸೋತು ನಿರ್ಗಮಿಸಿತ್ತು. ರೂನಿ ನಾಯಕತ್ವದಲ್ಲಿ ಯುರೋ 2016ರಲ್ಲಿ ಆಡಿದ್ದ ಇಂಗ್ಲೆಂಡ್ ತಂಡ ಐಸ್‌ಲ್ಯಾಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು.

‘‘ಇಂಗ್ಲೆಂಡ್‌ಗೆ ದೊಡ್ಡ ಕೊಡುಗೆ ನೀಡಿ ವಿದಾಯ ಹೇಳುವ ವಿಶ್ವಾಸದಲ್ಲಿರುವೆ. ಈ ತಂಡದಲ್ಲಿ ಆಡುವ ಮೂಲಕ ಆನಂದಿಸುತ್ತಿರುವೆ. ಯುರೋ ಟೂರ್ನಿಯ ಮೊದಲೇ ನಿವೃತ್ತಿಯ ಬಗ್ಗೆ ನಾನು ಯೋಚಿಸಿದ್ದೇನೆ’’ ಎಂದು ರೂನಿ ಹೇಳಿದ್ದಾರೆ.

1111111

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News