ಆಸ್ಟ್ರೇಲಿಯದ ವಿರುದ್ಧ 1 ರನ್‌ನಿಂದ ಸೋತ ಭಾರತ ‘ಎ’ ತಂಡ

Update: 2016-08-30 18:08 GMT

ಮೆಲ್ಬೋರ್ನ್, ಆ.30: ಚತುಷ್ಕೋನ ಏಕದಿನ ಸರಣಿಯಲ್ಲಿ ಕನ್ನಡಿಗ ಮನೀಷ್ ಪಾಂಡೆ ಬಾರಿಸಿದ ಶತಕದ(110ರನ್) ಹೊರತಾಗಿಯೂ ಭಾರತ ‘ಎ’ ತಂಡ ಆಸ್ಟ್ರೇಲಿಯ ‘ಎ’ ತಂಡದ ವಿರುದ್ಧ 1 ರನ್ ಅಂತರದಿಂದ ವೀರೋಚಿತ ಸೋಲುಂಡಿದೆ.

  ಭಾರತ ಈಗಾಗಲೇ ಫೈನಲ್‌ಗೆ ತಲುಪಿರುವ ಕಾರಣ ಈ ಸೋಲಿನಿಂದ ಯಾವುದೇ ಹಿನ್ನಡೆಯಾಗಿಲ್ಲ. ಭಾರತ ವಿರುದ್ಧ ರೋಚಕ ಜಯ ಸಾಧಿಸಿರುವ ಆಸ್ಟ್ರೇಲಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದೆ.

ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ಪ್ಯಾಟರ್‌ಸನ್(115) ಹಾಗೂ ಮ್ಯಾಡಿನ್ಸನ್(118) ದಾಖಲಿಸಿದ ಅವಳಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ಪ್ಯಾಟರ್‌ಸನ್ ಹಾಗೂ ಮ್ಯಾಡಿನ್ಸನ್ 2ನೆ ವಿಕೆಟ್‌ಗೆ 230 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು.

ಗೆಲ್ಲಲು ಕಠಿಣ ಸವಾಲು ಪಡೆದ ಭಾರತ ‘ಎ’ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿ ಒಂದೇ ರನ್ ಅಂತರದಿಂದ ಸೋಲುಂಡಿತು. ಆಸ್ಟ್ರೇಲಿಯದ ಪರ ವೊರ್ರೆಲ್(2-57) ಹಾಗೂ ಬಾಯ್ಸೆ(2-72) ತಲಾ ಎರಡು ವಿಕೆಟ್ ಪಡೆದರು.

322 ರನ್ ಗುರಿ ಪಡೆದಿದ್ದ ಭಾರತ ಒಂದು ಹಂತದಲ್ಲಿ 4 ವಿಕೆಟ್‌ಗೆ 144 ರನ್ ಗಳಿಸಿತ್ತು. ಆಗ 5ನೆ ವಿಕೆಟ್‌ಗೆ 157 ರನ್ ಜೊತೆಯಾಟ ನಡೆಸಿದ ಮನೀಷ್ ಪಾಂಡೆ(110 ರನ್, 91 ಎಸೆತ, 10 ಬೌಂಡರಿ,3 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್(87 ರನ್, 74 ಎಸೆತ, 6 ಬೌಂಡರಿ, 2 ಸಿಕ್ಸರ್) ತಂಡವನ್ನು ಆಧರಿಸಿದರು.

ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ ಬೆನ್ನಿಗೇ ಪಾಂಡೆ ಔಟಾದರು. ಭಾರತಕ್ಕೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 9 ರನ್ ಅಗತ್ಯವಿತ್ತು. ಮೊದಲ 4 ಎಸೆತಗಳಲ್ಲಿ 6 ರನ್ ಗಳಿಸಿದ ಭಾರತಕ್ಕೆ 2 ಎಸೆತಗಳಲ್ಲಿ 3 ರನ್ ಬೇಕಾಗಿದ್ದಾಗ ಸ್ಯಾಮ್ಸನ್ ವಿಕೆಟ್ ಕೈಚೆಲ್ಲಿದರು. ಜಯಂತ್ ಯಾದವ್ ಕೇವಲ 1 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ ರನ್ ಗಳಿಸಲು ಹೋಗಿ ರನೌಟಾದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಎ: 50 ಓವರ್‌ಗಳಲ್ಲಿ 322/6

(ಪ್ಯಾಟರ್ಸನ್ 115, ಮ್ಯಾಡಿನ್ಸನ್ 118, ಠಾಕೂರ್ 2-50)

ಭಾರತ ಎ: 50 ಓವರ್‌ಗಳಲ್ಲಿ 321/8

(ಮನೀಷ್ ಪಾಂಡೆ 110, ಸ್ಯಾಮ್ಸನ್ 87, ಮನ್‌ದೀಪ್ ಸಿಂಗ್ 56, ವೊರ್ರಲ್ 2-57, ಬೊಯ್ಸಾ 2-72)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News