ಯುಎಸ್ ಓಪನ್ :ಮರ್ರೆ, ಸೆರೆನಾ, ನಿಶಿಕೋರಿ ಎರಡನೆ ಸುತ್ತಿಗೆ ಲಗ್ಗೆ

Update: 2016-08-31 18:29 GMT

ನ್ಯೂಯಾರ್ಕ್, ಆ.31: ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಂಬಲ್ಡನ್ ಚಾಂಪಿಯನ್ ಬ್ರಿಟನ್‌ನ ಆ್ಯಂಡಿ ಮರ್ರೆ, ಜಪಾನ್‌ನ ಕೀ ನಿಶಿಕೋರಿ ಮತ್ತು ಅಮೆರಿಕದ ನಂ.1 ತಾರೆ ಸೆರೆನಾ ವಿಲಿಯಮ್ಸ್ ಎರಡನೆ ಸುತ್ತು ಪ್ರವೇಶಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಆ್ಯಂಡಿ ಮರ್ರೆ ಅವರು ಝೆಕ್ ಗಣರಾಜ್ಯದ ಲೂಕಸ್ ರೊಸೊಲ್ ವಿರುದ್ಧ 6-3, 6-2, 6-2 ಅಂತರದಲ್ಲಿ ಜಯ ಗಳಿಸಿ ಎರಡನೆ ಸುತ್ತು ತಲುಪಿದರು.
 2009ರ ಯುಎಸ್ ಓಪನ್ ಚಾಂಪಿಯನ್ ಜೂಯಾನ್ ಮಾರ್ಟಿನ್ ಡೆ ಪೆಟ್ರೊ ಅವರು ಅರ್ಜೆಂಟೀನದ ಡೀಗೊ ಸ್ಕುವಾರ್ಟ್ಸ್‌ಮ್ಯಾನ್ ವಿರುದ್ಧ 6-4, 6-4, 7-6(7-3) ಅಂತರದಿಂದ ಜಯ ಸಾಧಿಸಿದರು.
ಕಾರ್ಲೊವಿಕ್ ದಾಖಲೆ: ಕ್ರೊವೇಶಿಯಾದ ಇವೊ ಕಾರ್ಲೊವಿಕ್ ಅವರು ಥೈವಾನ್‌ನ ಲು ಯೆನ್ ಸುನ್ ವಿರುದ್ಧ 4-6, 7-6, (7-4), 6-7, (4/7), 7-6(7/5) ಅಂತರದಲ್ಲಿ ಜಯ ಗಳಿಸಿದರು.
 ಕಾರ್ಲೊವಿಕ್ ಅವರು 61 ಏಸ್ ಸಿಡಿಸುವ ಮೂಲಕ ಮೂಲಕ ದಾಖಲೆ ಯುಎಸ್ ಓಪನ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಅವರು ರಿಚರ್ಡ್ ಕ್ರಾಜಿಸೆಕ್ ದಾಖಲೆಯನ್ನು ಮುರಿದಿದ್ದಾರೆ. ರಿಚರ್ಡ್ ಅವರು 1999ರಲ್ಲಿ 49 ಏಸ್ ಸಿಡಿಸಿದ್ದರು. ಕಾರ್ಲೊವಿಕ್ ಟೂರ್ನಮೆಂಟ್‌ವೊಂದರಲ್ಲಿ 50ಕ್ಕೂ ಅಧಿಕ ಏಸ್ ಸಿಡಿಸಿದವರು.
 ಫ್ರೆಂಚ್ ಓಪನ್‌ನಲ್ಲಿ ಅವರು ಹೆವಿಟ್ ವಿರುದ್ಧ 55 ಏಸ್ ಸಿಡಿಸಿದ್ದರು. ವೃತ್ತಿ ಬದುಕಿನಲ್ಲಿ 11,277 ಏಸ್ ಸಿಡಿಸಿದ ಕೀರ್ತಿಗೆ ಕಾರ್ಲೊವಿಕ್ ಭಾಜನರಾಗಿದ್ದಾರೆ.
ನಿಶಿಕೋರಿಗೆ ಜಯ: ಜಪಾನ್ 6ನೆ ಶ್ರೇಯಾಂಕದ ಕಿ ನಿಶಿಕೋರಿ ಅವರು ಜರ್ಮನಿಯ ಬೆಂಜಮಿನ್ ಬೆಕರ್ ವಿರುದ್ಧ 6-1, 6-1, 3-6, 6-3 ಅಂತರದಲ್ಲಿ ಜಯ ಸಾಧಿಸಿದ್ದಾರೆ.
ನಿಶಿಕೋರಿ ಅವರು ಏಷ್ಯಾದಿಂದ ಗ್ರಾನ್ ಸ್ಲಾಮ್ ಫೈನಲ್ ತಲುಪಿದ್ದ ಮೊದಲ ಆಟಗಾರ. ಅವರು 2014ರ ಫೈನಲ್‌ನಲ್ಲಿ ಮರಿಸ್ ಸಿಲಿಕ್ ವಿರುದ್ಧ ಸೋಲು ಅನುಭವಿಸಿ ಟ್ರೋಫಿ ಎತ್ತುವ ಅವಕಾಶ ಕಳೆದುಕೊಂಡಿದ್ದರು.
ನಿಶಿಕೋರಿ ಮತ್ತು ಬೆಂಜಮಿನ್ ನಡುವಿನ ಹಣಾಹಣಿ 2 ಗಂಟೆ ಮತ್ತು 10 ನಿಮಿಷಗಳ ಕಾಲ ನಡೆಯಿತು.
ಸೆರೆನಾ ಶುಭಾರಂಭ: ವಿಶ್ವದ ನಂ.1 ಅಮೆರಿಕದ ಸೆರನಾ ವಿಲಿಯಮ್ಸ್ ಅವರು 7ನೆ ಬಾರಿ ಯುಎಸ್ ಓಪನ್ ಕಿರೀಟ ಧರಿಸುವ ಯೋಜನೆಯೊಂದಿಗೆ ಕಣಕ್ಕಿಳಿದಿದ್ದಾರೆ. ಅವರು ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.
ಸೆರೆನಾ ವಿಲಿಯಮ್ಸ್ ಅವರು ಏಕಟೆರಿನಾ ಮಕರೊವಾ ವಿರುದ್ಧ 6-3, 6-3 ಅಂತರದಲ್ಲಿ ಸುಲಭದ ಜಯ ಗಳಿಸಿದ್ದಾರೆ. ಈಗಾಗಲೇ ಎದುರಿಸಿದ ಐದು ಪಂದ್ಯಗಳಲ್ಲಿ ಮಕರೋವಾ ವಿರುದ್ಧ ಸೆರೆನಾ ನಾಲ್ಕನೆ ಬಾರಿ ಜಯ ಗಳಿಸಿದ್ದಾರೆ
 23ನೆ ಗ್ರಾನ್ ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಸೆರನಾ ಅವರಿಗೆ ಸ್ಟೆಫಿಗ್ರಾಫ್ ದಾಖಲೆಯನ್ನು ಮುರಿಯಲು ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಬೇಕಾಗಿದೆ. ರೊಮೆನಿಯಾದ ಸಿಮೊನಾ ಹಾಲೆಪ್ ಅವರು ಬೆಲ್ಜಿಯಂನ ಕ್ರಿಸ್ಟೆನ್ ಫಿಲ್ಪ್‌ಕೆನ್ಸ್‌ಗೆ 6-0, 6-2 ಅಂತರದಲ್ಲಿ ಸೋಲುಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News