×
Ad

ಮುಗುರುಝ, ರಾವೊನಿಕ್‌ಗೆ ಶಾಕ್, ನಡಾಲ್, ಜೊಕೊವಿಕ್ ಮುನ್ನಡೆ

Update: 2016-09-01 23:31 IST

ನ್ಯೂಯಾರ್ಕ್, ಸೆ.1: ಫ್ರೆಂಚ್ ಓಪನ್ ಚಾಂಪಿಯನ್ ಗಾರ್ಬೈನ್ ಮುಗುರುಝ ಹಾಗೂ ವಿಂಬಲ್ಡನ್ ಟೂರ್ನಿಯ ರನ್ನರ್-ಅಪ್ ಮಿಲೊಸ್ ರಾವೊನಿಕ್ ಯುಎಸ್ ಓಪನ್ ಕೂಟದಲ್ಲಿ ಆಘಾತಕಾರಿ ಸೋಲುಂಡಿದ್ದಾರೆ. ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ಅಂತಿಮ-32ರ ಸುತ್ತಿಗೆ ಪ್ರವೇಶಿಸಿದ್ದಾರೆ.

ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 3ನೆ ಶ್ರೇಯಾಂಕಿತೆ ಸ್ಪೇನ್‌ನ ಮುಗುರುಝ ವಿಶ್ವದ ನಂ.48ನೆ ಆಟಗಾರ್ತಿ ಅನಸ್ಟಸಿಜಾ ಸೆವಾಸ್ಟೋವಾ ವಿರುದ್ಧ 7-5, 6-4 ನೇರ ಸೆಟ್‌ಗಳಿಂದ ಶರಣಾದರು.

ಈ ಹಿಂದೆ 2013ರಲ್ಲಿ ಶೈಕ್ಷಣಿಕ ಕಾರಣಕ್ಕಾಗಿ ಟೆನಿಸ್‌ನಿಂದ ದೂರವುಳಿದಿದ್ದ 26ರ ಹರೆಯದ ಸೆವಾಸ್ಟೋವಾ ಐದು ವರ್ಷಗಳ ಬಳಿಕ ಯುಎಸ್ ಓಪನ್‌ನಲ್ಲಿ ಕಾಣಿಸಿಕೊಂಡಿದ್ದರು. ಸೆವಾಸ್ಟೋವಾ ಮುಂದಿನ ಸುತ್ತಿನಲ್ಲಿ ಕಟೆರಿನಾ ಬಾಂಡರೆಂಕೊ ರನ್ನು ಎದುರಿಸಲಿದ್ದಾರೆ. ಕಟರೆನಾ ಚೀನಾದ ಝಿಂಗ್ ಸೈ ವಿರುದ್ಧ 5-7, 7-6(7/5),7-5 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

 ರಾವೊನಿಕ್‌ಗೆ ಶಾಕ್: ಇದೇ ವೇಳೆ, ಪುರುಷರ ಸಿಂಗಲ್ಸ್‌ನಲ್ಲಿ 2ನೆ ಸುತ್ತಿನ ಪಂದ್ಯದಲ್ಲಿ ಅಮೆರಿಕದ 120ನೆ ರ್ಯಾಂಕಿನ ಆಟಗಾರ ರಿಯಾನ್ ಹ್ಯಾರಿಸನ್ ಕೆನಡಾದ 5ನೆ ಶ್ರೇಯಾಂಕದ ರಾವೊನಿಕ್‌ರನ್ನು 6-7(4/7), 7-5,7-5, 6-1 ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು.

ರಿಯಾನ್ ಅಂತಿಮ 16ರಲ್ಲಿ ಸ್ಥಾನ ಗಿಟ್ಟಿಸಲು ಮುಂದಿನ ಸುತ್ತಿನಲ್ಲಿ ಹಿರಿಯ ಆಟಗಾರ ಮಾರ್ಕೊಸ್ ಬಾಘ್‌ಡಾಟಿಸ್‌ರನ್ನು ಎದುರಿಸಲಿದ್ದಾರೆ.

 ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಫೇವರಿಟ್ ಆಗಿ ಗುರುತಿಸಿಕೊಂಡಿದ್ದ ರಾವೊನಿಕ್ 62 ಅನಗತ್ಯ ತಪ್ಪೆಸಗಿದರು. ರಾವೊನಿಕ್‌ಗೆ ಆಘಾತ ನೀಡಿರುವ ಹ್ಯಾರಿಸನ್ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಮೂರನೆ ಸುತ್ತಿಗೆ ತಲುಪಿದರು. ಟಾಪ್-10 ಎದುರಾಳಿ ವಿರುದ್ಧ ಆಡಿರುವ 27 ಪಂದ್ಯಗಳಲ್ಲಿ ಎರಡನೆ ಬಾರಿ ಜಯ ಸಾಧಿಸಿದ್ದಾರೆ.

ಒಂದು ಚೆಂಡು ಆಡದೇ ಪ್ರಿ-ಕ್ವಾರ್ಟರ್ ತಲುಪಿದ ಜೊಕೊವಿಕ್:

ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಒಂದೂ ಚೆಂಡು ಎದುರಿಸದೇ ಅಂತಿಮ-32ರ ಸುತ್ತಿಗೆ ತೇರ್ಗಡೆಯಾದರು. ಜೊಕೊವಿಕ್ ಎದುರಾಳಿ ಝೆಕ್ ಗಣರಾಜ್ಯದ ಜಿರಿ ವೆಸ್ಲೆ ಗಾಯದ ಸಮಸ್ಯೆಯಿಂದಾಗಿ 2ನೆ ಸುತ್ತಿನ ಪಂದ್ಯದಿಂದ ಹಿಂದೆ ಸರಿದ ಕಾರಣ ಜೊಕೊವಿಕ್ ಮುಂದಿನ ಸುತ್ತಿಗೆ ತೆರಳಿದರು. ಜೊಕೊವಿಕ್ ಸತತ 33ನೆ ಬಾರಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

ಜೊಕೊವಿಕ್ ಶುಕ್ರವಾರ ನಡೆಯಲಿರುವ ಮುಂದಿನ ಸುತ್ತಿನ ಪಂದ್ಯದಲ್ಲಿ ರಶ್ಯದ ಮಿಖೈಲ್ ಯೂಝ್ನಿ ಅವರನ್ನು ಎದುರಿಸಲಿದ್ದಾರೆ.

ಮುಚ್ಚಿದ ಮೇಲ್ಛಾವಣಿಯ ಕೆಳಗೆ ಆಡಿದ ನಡಾಲ್: ಸ್ಪೇನ್‌ನ ಸೂಪರ್‌ಸ್ಟಾರ್ ರಫೆಲ್ ನಡಾಲ್ ಇದೇ ಮೊದಲ ಬಾರಿ ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಮುಚ್ಚಿದ ಮೇಲ್ಛಾವಣಿಯ ಕೆಳಗೆ 2ನೆ ಸುತ್ತಿನ ಪಂದ್ಯವನ್ನು ಆಡಿ ಜಯ ಸಾಧಿಸಿದರು.

150 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೇಲ್ಛಾವಣಿಯನ್ನು ತುಂತುರು ಮಳೆ ಬೀಳುತ್ತಿದ್ದ ಕಾರಣ ಮೊದಲ ಬಾರಿ ತೆರೆಯಲಾಯಿತು. 2 ಬಾರಿಯ ಚಾಂಪಿಯನ್ ನಡಾಲ್ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ ಅವರನ್ನು 6-0, 7-5, 6-1 ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದರು. ಮುಂದಿನ ಸುತ್ತಿನಲ್ಲಿ ರಶ್ಯದ ಆ್ಯಂಡ್ರೆ ಕುಝ್ನೆಸೋವಾರನ್ನು ಎದುರಿಸಲಿದ್ದಾರೆ.

ತುಂತುರು ಮಳೆಯಿಂದಾಗಿ ಪಂದ್ಯ 10:38ಕ್ಕೆ ಸ್ಥಗಿತಗೊಳಿಸಲಾಯಿತು. 10:46ಕ್ಕೆ ಪುನರಾರಂಭಿಸಲಾಯಿತು. ಪಂದ್ಯವನ್ನು ಕೇವಲ 7 ನಿಮಿಷ, 22 ಸೆಕೆಂಡ್ ನಿಲ್ಲಿಸಲಾಗಿತ್ತು. ಸ್ಟೇಡಿಯಂ ಮೇಲ್ಛಾವಣಿವನ್ನು ಕೇವಲ5 ನಿಮಿಷ, 35 ಸೆಕೆಂಡ್‌ನಲ್ಲಿ ಮುಚ್ಚಲಾಗಿತ್ತು ಎಂದು ಯುಎಸ್ ಟೆನಿಸ್ ಸಂಸ್ಥೆ ತಿಳಿಸಿದೆ.

‘‘ಮುಚ್ಚಿದ ಮೇಲ್ಛಾವಣಿಯಲ್ಲಿ ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಮೇಲ್ಛಾವಣಿ ಎತ್ತರವಾಗಿದ್ದ ಕಾರಣ ಅದು ಮುಚ್ಚಿರುವುದರಿಂದ ದೊಡ್ಡ ವ್ಯತ್ಯಾಸ ಕಂಡುಬರಲಿಲ್ಲ. ಇದೊಂದು ಹೊಸ ಅನುಭವ’’ಎಂದು ನಡಾಲ್ ಹೇಳಿದ್ದಾರೆ.

ಮಾಜಿ ವಿಶ್ವದ ನಂ.1 ಆಟಗಾರ್ತಿ ಕಾರೊಲಿನ್ ವೋಝ್ನಿಯಾಕಿ 2004ರ ಯುಎಸ್ ಓಪನ್ ಚಾಂಪಿಯನ್ ಸ್ವೆಟ್ಲಾನಾ ಕುಝ್ನೆಸೋವಾರನ್ನು 6-4, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಕುಸಿದು ಬಿದ್ದ ಕಾಂಟಾ: ಬ್ರಿಟನ್‌ನ ಜೋಹನ್ನಾ ಕಾಂಟಾ ಉಷ್ಣಾಂಶವನ್ನು ತಡೆಯಲಾರದೆ ಟೆನಿಸ್‌ಕೋರ್ಟ್‌ನಲ್ಲಿ ಕುಸಿದುಬಿದ್ದರು. ಬಳಿಕ ಚೇತರಿಸಿಕೊಂಡು ಬಲ್ಗೇರಿಯದ ಸ್ವೆತಾನಾ ಪಿರೊಂಕೊವಾರನ್ನು 6-2, 5-7, 6-2 ಸೆಟ್‌ಗಳಿಂದ ಮಣಿಸಿದರು.

ಕೆರ್ಬರ್‌ಗೆ ಜಯ: ದ್ವಿತೀಯ ಶ್ರೇಯಾಂಕಿತೆ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಕ್ರೊಯೇಷಿಯಾದ ಮಿರ್ಜಾನಾ ಲೂಸಿಕ್-ಬರೊನಿ ಅವರನ್ನು 6-2, 7-6(9/7) ಸೆಟ್‌ಗಳ ಅಂತರದಿಂದ ಸೋಲಿಸಿ ಅಂತಿಮ-32ರ ರೌಂಡ್‌ಗೆ ತಲುಪಿದ್ದಾರೆ. ಕೆರ್ಬರ್ ಮುಂದಿನ ಸುತ್ತಿನಲ್ಲಿ ಅಮೆರಿಕದ 17ರ ಹರೆಯದ ಆಟಗಾರ್ತಿ ಸಿಸಿ ಬೆಲ್ಲಿಸ್‌ರನ್ನು ಎದುರಿಸುವರು.

ಪುರುಷರ ಸಿಂಗಲ್ಸ್‌ನಲ್ಲಿ ಬ್ರಿಟನ್‌ನ ಕೈಲ್ ಎಡ್ಮಂಡ್, ಅಮೆರಿಕದ ಜಾನ್ ಇಸ್ನೇರ್ ಹಾಗೂ ಕ್ರೊಯೇಷಿಯದ ಮರಿನ್ ಸಿಲಿಕ್ ಅಂತಿಮ-32ರ ರೌಂಡ್‌ಗೆ ತಲುಪಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News