×
Ad

ಇಂಗ್ಲೆಂಡ್‌ನ ವಿಶ್ವ ದಾಖಲೆ ಹೀರೋ ಅಲೆಕ್ಸ್‌ಗೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ!

Update: 2016-09-01 23:45 IST

ನಾಟಿಂಗ್‌ಹ್ಯಾಮ್, ಸೆ.3: ಪಾಕಿಸ್ತಾನ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಇಂಗ್ಲೆಂಡ್ ತಂಡ ವಿಶ್ವದಾಖಲೆಯ ಮೊತ್ತ ಗಳಿಸಲು ಕಾರಣರಾಗಿದ್ದ ಅಲೆಕ್ಸ್ ಹೇಲ್ಸ್‌ಗೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೇಲ್ಸ್ ಒಂದು ವೇಳೆ ಮುಂಬರುವ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದರೆ ಸಮಸ್ಯೆ ಎದುರಿಸಲಿದ್ದಾರೆ.

  ಕಳೆದ ತಿಂಗಳು ಢಾಕಾ ಕೆಫೆಯ ಮೇಲೆ ಸಂಘಟನೆಯೊಂದರ ಉಗ್ರಗಾಮಿಗಳ ಗುಂಪು ನಡೆಸಿದ್ದ ದಾಳಿಯಲ್ಲಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಸತ್ತವರಲ್ಲಿ ವಿದೇಶಿಯರು ಅಧಿಕ ಸಂಖ್ಯೆಯಲ್ಲಿದ್ದರು. ಬಾಂಗ್ಲಾದಲ್ಲಿ ಬಾಂಬು ಸ್ಫೋಟಗೊಂಡ ಕಾರಣ ಇಂಗ್ಲೆಂಡ್‌ಗೆ ಅಲ್ಲಿಗೆ ಪ್ರವಾಸ ಕೈಗೊಳ್ಳುವ ಬಗ್ಗೆ ಅನಿಶ್ಚಿತತೆಯಿತ್ತು.

 ಕಳೆದ ವಾರವಷ್ಟೇ ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಬಾಂಗ್ಲಾದೇಶದ ವಿರುದ್ಧ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ 3 ಏಕದಿನ ಹಾಗೂ 2 ಟ್ವೆಂಟಿ-20 ಪಂದ್ಯಗಳನ್ನು ಆಡಲು ಬಾಂಗ್ಲಾಕ್ಕೆ ಪ್ರವಾಸ ಕೈಗೊಳ್ಳಲಾಗುತ್ತದೆ ಎಂದು ಘೋಷಿಸಿತ್ತು. ಇಸಿಬಿ ನಿಯೋಗ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಅಲ್ಲಿನ ಭದ್ರತೆ ಪರಿಶೀಲಿಸಿದ ಬಳಿಕ ಈ ಘೋಷಣೆ ಹೊರಬಿದ್ದಿತ್ತು.

ಇಂಗ್ಲೆಂಡ್‌ನ ಯಾವೊಬ್ಬ ಆಟಗಾರನು ಬಾಂಗ್ಲಾದೇಶಕ್ಕೆ ತೆರಳುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಸಹಿತ ಇಂಗ್ಲೆಂಡ್‌ನ ಹೆಚ್ಚಿನ ಆಟಗಾರರು ಭದ್ರತೆಯ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ. ನಾಟಿಂಗ್‌ಹ್ಯಾಮ್ ಶೈರ್‌ನ ಆರಂಭಿಕ ದಾಂಡಿಗ ಅಲೆಕ್ಸ್ ಪಾಕ್ ವಿರುದ್ಧದ 3ನೆ ಏಕದಿನ ಪಂದ್ಯದಲ್ಲಿ 171 ರನ್ ಗಳಿಸಿ ಇಂಗ್ಲೆಂಡ್ ತಂಡ ವಿಶ್ವದಾಖಲೆ ಸ್ಕೋರ್ 444 ರನ್ ಗಳಿಸಲು ನೆರವಾಗಿದ್ದರು.

 ‘‘ಒಂದು ವೇಳೆ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲು ಒಪ್ಪದೇ ಇದ್ದರೆ ನಮ್ಮ ಸ್ಥಾನಕ್ಕೆ ಕುತ್ತುಬರುತ್ತದೆ. ಅತ್ಯಂತ ಮುಖ್ಯವಾಗಿ ನನಗೆ ಹೆಚ್ಚು ಅಪಾಯವಿದೆ. ಏನು ಮಾಡಬೇಕೆಂಬ ಬಗ್ಗೆ ಗೊಂದಲದಲ್ಲಿರುವೆ. ಮುಂದಿನ ಕೆಲವೇ ದಿನಗಳಲ್ಲಿ ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗಿದೆ’’ಎಂದು ಹೇಲ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News