ಮೆಸ್ಸಿ ಮ್ಯಾಜಿಕ್: ಅರ್ಜೆಂಟೀನಕ್ಕೆ ಜಯ
ಮ್ಯಾಡ್ರಿಡ್, ಸೆ.2: ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಬಳಿಕ ಆಡಿದ ಮೊದಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಉರುಗ್ವೆ ವಿರುದ್ಧ 1-0 ಗೋಲು ಅಂತರದಿಂದ ಜಯ ಸಾಧಿಸಲು ನೆರವಾಗಿದ್ದಾರೆ.
ಈ ಗೆಲುವಿನೊಂದಿಗೆ 2018ರಲ್ಲಿ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಿರುವ 7 ಪಂದ್ಯಗಳಲ್ಲಿ 14 ಅಂಕ ಗಳಿಸಿರುವ ಅರ್ಜೆಂಟೀನ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಉರುಗ್ವೆ, ಕೊಲಂಬಿಯಾ ಹಾಗೂ ಈಕ್ವಡಾರ್ ತಂಡಗಳಿಗಿಂತ ಒಂದು ಅಂಕದಿಂದ ಮುಂದಿದೆ.
ಮೊದಲಾರ್ಧದಲ್ಲಿ ಯುವ ಫಾರ್ವರ್ಡ್ ಆಟಗಾರ ಪೌಲೊ ಡಿಬಾಲಾ ಕೆಂಪುಕಾರ್ಡ್ ಪಡೆದು ಮೈದಾನದಿಂದ ಹೊರ ನಡೆದ ಕಾರಣ 10 ಆಟಗಾರರೊಂದಿಗೆ ಆಡಿದ ಅರ್ಜೆಂಟೀನಕ್ಕೆ ಮೆಸ್ಸಿ ಆಸರೆಯಾದರು. ಮೆಸ್ಸಿ 42ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು. ಮೊದಲಾರ್ಧದಲ್ಲಿ ಗೋಲು ಬಾರಿಸಿದ ಅರ್ಜೆಂಟೀನ 1-0 ಮುನ್ನಡೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಯಿತು.
114ನೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ 56ನೆ ಗೋಲು ಬಾರಿಸಿದ ಮೆಸ್ಸಿ ಅರ್ಜೆಂಟೀನದ ಪರ ಟಾಪ್ ಸ್ಕೋರರ್ ಎನಿಸಿಕೊಂಡರು.
‘‘ನಾನು ಈ ಪಂದ್ಯವನ್ನು ಆಡುವ ಬಗ್ಗೆ ಗೊಂದಲವಿತ್ತು. ನಾನು ಜೂನ್‌ನಲ್ಲಿ ನಿವೃತ್ತಿ ಘೋಷಿಸಿದಾಗ ಅಭಿಮಾನಿಗಳು ನನ್ನ ಮೇಲೆ ಬಹಳಷ್ಟು ಅಭಿಮಾನ ತೋರಿದ್ದರು. ಅವರ ಪ್ರೀತಿಗೆ ಆಭಾರಿಯಾಗಿರುವೆ’’ಎಂದು ಮೆಸ್ಸಿ ಹೇಳಿದ್ದಾರೆ.
ಜೂನ್‌ನಲ್ಲಿ ನಡೆದ ಕೊಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲಿ ಅರ್ಜೆಂಟೀನ ತಂಡ ಚಿಲಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತ ನಿರಾಸೆಯಲ್ಲಿ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು. ಇತ್ತೀಚೆಗಷ್ಟೇ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಮತ್ತೊಂದು ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಬ್ರೆಝಿಲ್ ತಂಡ ಈಕ್ವಡಾರ್ ತಂಡವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿತು. ಯುವ ಆಟಗಾರ ಗಾಬ್ರಿಯೆಲ್ ಜೆಸಸ್ ಅವಳಿ ಗೋಲು ಬಾರಿಸಿದರು.
ನೂತನ ಕೋಚ್ ಫ್ರಾನ್ಸಿಸ್ಕೊ ಅರ್ಸಿ ಮಾರ್ಗದರ್ಶನದಲ್ಲಿ ಆಡಿರುವ ಪರಾಗ್ವೆ ತಂಡ ಕೋಪಾ ಅಮೆರಿಕ ಚಾಂಪಿಯನ್ ಚಿಲಿ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಶಾಕ್ ನೀಡಿತು.