ನಾಲ್ಕನೆ ಏಕದಿನ: ಇಂಗ್ಲೆಂಡ್‌ಗೆ ಜಯ
ಲೀಡ್ಸ್, ಸೆ.2: ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋ ಬಾರಿಸಿದ ಅರ್ಧಶತಕದ ನೆರವಿನಿಂದ ಹೆಡ್ಡಿಂಗ್ಲೆಯಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದೆ.
ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ನಾಯಕ ಅಝರ್ ಅಲಿ(80) ಹಾಗೂ ಆಲ್‌ರೌಂಡರ್ ಇಮಾದ್ ವಾಸಿಮ್(ಔಟಾಗದೆ 57) ಅರ್ಧಶತಕದ ಬೆಂಬಲದಿಂದ ಪಾಕಿಸ್ತಾನ ಆಂಗ್ಲರ ಗೆಲುವಿಗೆ 248 ರನ್ ಗುರಿ ನೀಡಿತ್ತು.
3ನೆ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆ ಸ್ಕೋರ್(444 ರನ್) ಗಳಿಸಿದ್ದ ಇಂಗ್ಲೆಂಡ್ ತಂಡ ಈ ಮೊತ್ತವನ್ನು ಸುಲಭವಾಗಿ ತಲುಪಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆತಿಥೇಯರು 15 ಓವರ್‌ನೊಳಗೆ 72 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು. 3ನೆ ಏಕದಿನದಲ್ಲಿ 171 ರನ್ ಗಳಿಸಿದ್ದ ಅಲೆಕ್ಸ್ ಹೇಲ್ಸ್ ಮುಹಮ್ಮದ್ ಇರ್ಫಾನ್ ಎಸೆತದಲ್ಲಿ ಕೇವಲ 8 ರನ್‌ಗೆ ಔಟಾದರು. ಸತತ 8ನೆ ಏಕದಿನ ಅರ್ಧಶತಕ ಗಳಿಸುವ ವಿಶ್ವಾಸ ಮೂಡಿಸಿದ್ದ ಜೋ ರೂಟ್ 30 ರನ್ ಗಳಿಸಿ ಔಟಾದರು. ನಾಯಕ ಇಯಾನ್ ಮೊರ್ಗನ್(11) ಅಲ್ಪ ಮೊತ್ತಕ್ಕೆ ಔಟಾದರು.
ಆಗ 5ನೆ ವಿಕೆಟ್‌ಗೆ 103 ರನ್ ಜೊತೆಯಾಟ ನಡೆಸಿದ ಸ್ಟೋಕ್ಸ್(69) ಹಾಗೂ ವಿಕೆಟ್‌ಕೀಪರ್ ಬೈರ್‌ಸ್ಟೋ(61) ತಂಡವನ್ನು ಆಧರಿಸಿದರು.
ಅಝರ್ ಅಲಿ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿದ ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ(ಔಟಾಗದೆ 45) ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.
64 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ ಅರ್ಧಶತಕ ಪೂರೈಸಿದ ಬೈರ್‌ಸ್ಟೋ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕಾರ್ಡಿಫ್‌ನಲ್ಲಿ ರವಿವಾರ ಐದನೆ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ.