ಝಹೀರ್‌ಖಾನ್‌ಗೆ ಎಂಸಿಸಿ ಗೌರವ ಆಜೀವ ಸದಸ್ಯತ್ವ
ಲಂಡನ್, ಸೆ.2: ಭಾರತದ ಮಾಜಿ ವೇಗದ ಬೌಲರ್ ಝಹೀರ್ ಖಾನ್‌ರನ್ನು ಮ್ಯಾರಿಲ್‌ಬಾನ್ ಕ್ರಿಕೆಟ್ ಕ್ಲಬ್‌ನ(ಎಂಸಿಸಿ) ಗೌರವ ಆಜೀವ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಝಹೀರ್ ಈ ಗೌರವಕ್ಕೆ ಪಾತ್ರರಾಗುತ್ತಿರುವ ಭಾರತದ 24ನೆ ಕ್ರಿಕೆಟಿಗನಾಗಿದ್ದಾರೆ.
ಝಹೀರ್ ಖಾನ್‌ರನ್ನು ಕ್ಲಬ್‌ನ ಗೌರವ ಆಜೀವ ಸದಸ್ಯರನ್ನಾಗಿ ಎಂಸಿಸಿ ಆಯ್ಕೆ ಮಾಡಿದೆ ಎಂದು ಕ್ಲಬ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಕಳೆದ ತಿಂಗಳು ಭಾರತದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಎಂಸಿಸಿ ಗೌರವ ಆಜೀವ ಸದಸ್ಯರಾಗಿ ಆಯ್ಕೆಯಾಗಿದ್ದು, ಇದೀಗ ಝಹೀರ್ ಕೂಡ ಈ ಗೌರವಕ್ಕೆ ಭಾಜನರಾಗಿದ್ದಾರೆ. ಈ ಹಿಂದೆ ಸುನೀಲ್ ಗವಾಸ್ಕರ್ ಹಾಗೂ ಸಚಿನ್ ತೆಂಡುಲ್ಕರ್ ಕೂಡ ಈ ಗೌರವಕ್ಕೆ ಭಾಜನರಾಗಿದ್ದರು.
ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಭಾರತ ತಂಡದಲ್ಲಿ 92 ಟೆಸ್ಟ್ ಪಂದ್ಯಗಳನ್ನು ಆಡಿರುವ ಝಹೀರ್ ಒಟ್ಟು 311 ವಿಕೆಟ್‌ಗಳನ್ನು ಪಡೆದಿದ್ದರು. ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲೂ ತನ್ನ ಛಾಪು ಮೂಡಿಸಿದ್ದ ಝಹೀರ್ 200 ಏಕದಿನಗಳಲ್ಲಿ 282 ವಿಕೆಟ್‌ಗಳನ್ನು ಕಬಳಿಸಿದ್ದರು. ಐತಿಹಾಸಿಕ ಲಾರ್ಡ್ಸ್ ಸ್ಟೇಡಿಯಂನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಝಹೀರ್ ಕೂದಲೆಳೆ ಅಂತರದಿಂದ ಲಾರ್ಡ್ಸ್ ಗೌರವ ಮಂಡಳಿಯಲ್ಲಿ ಸ್ಥಾನ ವಂಚಿತರಾಗಿದ್ದರು.
2000ರಲ್ಲಿ ಏಕದಿನ ಪಂದ್ಯಕ್ಕೆ ಕಾಲಿಟ್ಟಿದ್ದ ಝಹೀರ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ 2002ರ ನಾಟ್‌ವೆಸ್ಟ್ ಸರಣಿ ಸಹಿತ ಒಟ್ಟು 3 ಏಕದಿನ ಪಂದ್ಯಗಳನ್ನು ಆಡಿದ್ದರು.
2015ರಲ್ಲಿ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಝಹೀರ್ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.
‘‘ಭಾರತದಲ್ಲಿ ಝಹೀರ್‌ಖಾನ್ ಉತ್ತಮ ಕ್ರಿಕೆಟ್ ಸೇವಕನಾಗಿದ್ದರು. ಹಲವಾರು ವರ್ಷಗಳ ಕಾಲ ಆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಕಾರಣಕ್ಕಾಗಿ ಅವರಿಗೆ ಕ್ಲಬ್‌ನ ಗೌರವ ಆಜೀವ ಸದಸ್ಯತ್ವ ನೀಡಲು ನಮಗೆ ಸಂತೋಷವಾಗುತ್ತಿದೆ’’ಎಂದು ಎಂಸಿಸಿ ಹೆಡ್ ಆಫ್ ಕ್ರಿಕೆಟ್‌ನ ಜಾನ್ ಸ್ಟೀಫನ್‌ಸನ್ ಹೇಳಿದ್ದಾರೆ.