ಐಸಿಸಿಯಿಂದ ಇಂಗ್ಲೆಂಡ್‌ಗೆ ಭರ್ಜರಿ ಅನುದಾನ: ಬಿಸಿಸಿಐ ಅಸಮಾಧಾನ
ಹೊಸದಿಲ್ಲಿ, ಸೆ.3: ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಆಯೋಜನಾ ವೆಚ್ಚವಾಗಿ ಸುಮಾರು 135 ಮಿಲಿಯನ್ ಯುಎಸ್ ಡಾಲರ್ ಅನುದಾನ ಬಿಡುಗಡೆಗೊಳಿಸಲು ಐಸಿಸಿ ನಿರ್ಧರಿಸಿದೆ. ಐಸಿಸಿಯ ಈ ನಿರ್ಧಾರಕ್ಕೆ ಬಿಸಿಸಿಐ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜೂ.1 ರಿಂದ 18ರ ತನಕ ನಿಗದಿಯಾಗಿದೆ.
ಭಾರತದಲ್ಲಿ ಈ ವರ್ಷ ಮಾ.8 ರಿಂದ ಎ.3ರ ತನಕ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಐಸಿಸಿ, ಬಿಸಿಸಿಐಗೆ ಆಯೋಜನಾ ವೆಚ್ಚವಾಗಿ 45 ಮಿಲಿಯನ್ ಯುಎಸ್ ಡಾಲರ್ ಮಂಜೂರು ಮಾಡಿತ್ತು. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಭಾರತಕ್ಕೆ ನೀಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಬಜೆಟ್‌ನ್ನು ಇಂಗ್ಲೆಂಡ್‌ಗೆ ನೀಡಲು ನಿರ್ಧರಿಸಿರುವ ಐಸಿಸಿ ನಡೆ ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದೆ.
ಐಸಿಸಿ ಯಾವುದೇ ಟೂರ್ನಿಯನ್ನು ಆಯೋಜಿಸಿದರೂ ನಿರ್ದಿಷ್ಟ ಬಜೆಟ್‌ನ್ನು ಆತಿಥೇಯ ರಾಷ್ಟ್ರಕ್ಕೆ ಮಂಜೂರು ಮಾಡುತ್ತದೆ. ಆತಿಥೇಯ ರಾಷ್ಟ್ರ ಸ್ಥಳೀಯ ಆಯೋಜನಾ ಸಮಿತಿ(ಎಲ್‌ಒಸಿ)ಯನ್ನು ನೇಮಕ ಮಾಡುತ್ತದೆ. ಎಲ್‌ಒಸಿ ಟೂರ್ನಿ ಆಯೋಜನೆಯ ಎಲ್ಲ ಖರ್ಚು-ವೆಚ್ಚದ ಜವಾಬ್ದಾರಿ ಹೊಂದಿರುತ್ತದೆ.
ಬ್ರಿಟನ್‌ನಲ್ಲಿ 19 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ 15 ಪಂದ್ಯಗಳು ನಡೆಯುತ್ತವೆ. ಭಾರತದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ 27 ದಿನಗಳ ಕಾಲ ನಡೆದಿದ್ದು ಒಟ್ಟು 58 ಪಂದ್ಯಗಳು(ಪುರುಷರ 35, ಮಹಿಳೆಯರ 23 ಪಂದ್ಯಗಳು) ನಡೆದಿದ್ದವು.
ಮೇ-ಜೂನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಚಾಂಪಿಯನ್ಸ್ ಟ್ರೋಫಿ 2017ರ ಡ್ರಾಫ್ಟ್ ಬಜೆಟ್‌ನ ಪ್ರತಿಯನ್ನು ಎಲ್ಲ ಸದಸ್ಯರಿಗೆ ಐಸಿಸಿ ವಿತರಿಸಿತ್ತು.