ಯುಎಸ್ ಓಪನ್: ಜೊಕೊವಿಕ್, ನಡಾಲ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ

Update: 2016-09-03 18:12 GMT

 ನ್ಯೂಯಾರ್ಕ್, ಸೆ.3: ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಟಾರ್ ಆಟಗಾರರಾದ ನೊವಾಕ್ ಜೊಕೊವಿಕ್ ಹಾಗೂ ರಫೆಲ್ ನಡಾಲ್ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಅಮೆರಿಕದ ಟೆನಿಸ್ ಆಟಗಾರ ಜಾಕ್ ಸಾಕ್ 2014ರ ಚಾಂಪಿಯನ್ ಕ್ರೊಯೇಷಿಯದ ಮರಿನ್ ಸಿಲಿಕ್‌ಗೆ ಶಾಕ್ ನೀಡಿದ್ದು ಶುಕ್ರವಾರ ಪಂದ್ಯದ ಹೈಲೈಟ್ ಎನಿಸಿಕೊಂಡಿತು.

 ಮುಂಗೈ ಹೊಡೆತ ಹಾಗೂ ಬಿಗ್ ಸರ್ವ್‌ಗೆ ಹೆಸರುವಾಸಿಯಾಗಿರುವ 26ನೆ ಶ್ರೇಯಾಂಕದ ಸಾಕ್‌ಗೆ ಶುಕ್ರವಾರ ಶುಭದಿನವಾಗಿ ಪರಿಣಮಿಸಿತು. ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ 1 ಗಂಟೆ ಹಾಗೂ 41 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜಾಕ್ ಸಾಕ್ ಅವರು ಸಿಲಿಕ್‌ರನ್ನು 6-4, 6-3, 6-3 ನೇರ ಸೆಟ್‌ಗಳಿಂದ ಸದೆ ಬಡಿದರು. ಮೂರು ಸೆಟ್‌ನಲ್ಲಿ ನಾಲ್ಕು ಬಾರಿ ಸಿಲಿಕ್ ಸರ್ವ್‌ನ್ನು ಬ್ರೇಕ್ ಮಾಡಿದ ಸಾಕ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ಸ್ಪರ್ಧೆಯಲ್ಲಿ ಒಂದೂ ಬ್ರೇಕ್‌ಪಾಯಿಂಟ್ ಎದುರಿಸಿಲ್ಲ.

ಸಾಕ್ ಮುಂದಿನ ಸುತ್ತಿನಲ್ಲಿ 2 ಬಾರಿ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಫ್ರಾನ್ಸ್‌ನ ಜೋ-ವಿಲ್ಪ್ರೆಡ್ ಸೋಂಗರನ್ನು ಎದುರಿಸಲಿದ್ದಾರೆ. ಸೋಂಗ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್‌ರನ್ನು 6-3, 6-4, 7-6(7/4) ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಕೇವಲ 32 ನಿಮಿಷಗಳಲ್ಲಿ ಪ್ರಿ-ಕ್ವಾರ್ಟರ್ ತಲುಪಿದ ಜೊಕೊವಿಕ್:

ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಕೇವಲ 32 ನಿಮಿಷಗಳಲ್ಲಿ ಯುಎಸ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಜೊಕೊವಿಕ್‌ರ ಎದುರಾಳಿ ರಶ್ಯದ ಮಿಖೈಲ್ ಯೂಝ್ನಿ ಸ್ನಾಯು ಸೆಳೆತದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಆಗ ಹಾಲಿ ಚಾಂಪಿಯನ್ ಜೊಕೊವಿಕ್ ಮೊದಲ ಸೆಟ್‌ನಲ್ಲಿ 4-2 ಅಂತರದಿಂದ ಮುನ್ನಡೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಅವರು ಮುಂದಿನ ಸುತ್ತಿಗೆ ತಲುಪಿದರು.

ಜೊಕೊವಿಕ್ ಸೋಮವಾರ ಜೆರಿ ಜಾನೊವಿಝ್ ವಿರುದ್ಧ ನಾಲ್ಕು ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ಬಳಿಕ ಎರಡನೆ ಸುತ್ತಿನ ಪಂದ್ಯವನ್ನು ಆಡದೇ ಮೂರನೆ ಸುತ್ತಿಗೆ ವಾಕ್‌ಓವರ್ ಪಡೆದಿದ್ದರು. 3ನೆ ಸುತ್ತಿನ ಪಂದ್ಯದಲ್ಲಿ ಝೆಕ್‌ನ ಎದುರಾಳಿ ಜೆರಿ ವೆಸ್ಲೆ ಕೈನೋವಿನ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

‘‘ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ನನಗೆ ಈ ರೀತಿ ಹಿಂದೆಂದೂ ಆಗಿಲ್ಲ. ಒಂದು ಪಂದ್ಯದಲ್ಲಿ ವಾಕ್‌ಓವರ್ ಹಾಗು ಮತ್ತೊಂದು ಪಂದ್ಯದಲ್ಲಿ ಕೇವಲ ಅರ್ಧಗಂಟೆ ಮಾತ್ರ ಆಡಿರುವುದು ನನ್ನ ಟೆನಿಸ್ ಬಾಳ್ವೆಯಲ್ಲಿ ಇದೇ ಮೊದಲು’’ ಎಂದು ಜೊಕೊವಿಕ್ ಪ್ರತಿಕ್ರಿಯಿಸಿದ್ದಾರೆ.

 ಅಗ್ರ ಶ್ರೇಯಾಂಕದ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ವಿಶ್ವದ ನಂ.84ನೆ ಆಟಗಾರ ಕೈಲ್ ಎಡ್ಮಂಡ್‌ರನ್ನು ಎದುರಿಸಲಿದ್ದಾರೆ.

ಎಡ್ಮಂಡ್ ಮತ್ತೊಂದು ಮೂರನೆ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಅಮೆರಿಕದ ಜಾನ್ ಇಸ್ನೆರ್‌ರನ್ನು 6-4, 3-6, 6-2, 7-6(7/5) ಸೆಟ್‌ಗಳ ಅಂತರದಿಂದ ಸೋಲಿಸಿ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೆ ಸುತ್ತು ತಲುಪಿದ್ದಾರೆ.

ಮೂರು ವರ್ಷಗಳ ಬಳಿಕ 4ನೆ ಸುತ್ತಿಗೇರಿದ ನಡಾಲ್:

 ಎರಡು ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಯುಎಸ್ ಓಪನ್‌ನಲ್ಲಿ ನಾಲ್ಕನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ನಡಾಲ್ 2013ರ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಪ್ರಿ-ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ನಡಾಲ್ ರಶ್ಯದ ಆ್ಯಂಡ್ರೆ ಕುಝ್ನೆಸೋವಾ ವಿರುದ್ಧ 6-1, 6-4, 6-2 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

‘‘ಆ್ಯಂಡ್ರೆ ಯಾವಾಗಲೂ ಕಠಿಣ ಎದುರಾಳಿ. ನಾನು ಮೊದಲ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಎರಡನೆ ಸೆಟ್‌ನಲ್ಲಿ ಸರ್ವ್ ವೇಳೆ ಸ್ವಲ್ಪ ಸಮಸ್ಯೆ ಎದುರಾಗಿತ್ತು. ಮೂರನೆ ಸೆಟ್ ಅತ್ಯಂತ ಮುಖ್ಯವಾಗಿತ್ತು’’ ಎಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಫ್ರಾನ್ಸ್‌ನ ಲೂಕಾಸ್ ಪೌಲ್ಲಿ ಅವರನ್ನು ಎದುರಿಸಲಿರುವ ನಡಾಲ್ ಹೇಳಿದ್ದಾರೆ.

ಒಸಾಕಾರನ್ನು ಮಣಿಸಿದ ಮ್ಯಾಡಿಸನ್:

 ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 8ನೆ ಶ್ರೇಯಾಂಕಿತೆ ಕೀ ಮ್ಯಾಡಿಸನ್ ಜಪಾನ್‌ನ ನಯೊಮಿ ಒಸಾಕಾರನ್ನು 7-5, 4-6, 7-6(7/3) ಸೆಟ್‌ಗಳ ಅಂತರದಿಂದ ಮಣಿಸಿದರು.

ಕೆರ್ಬರ್‌ಗೆ ಸುಲಭ ಜಯ:

ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅಮೆರಿಕದ 17ರ ಹರೆಯದ ಸಿಸಿ ಬೆಲ್ಲಿಸ್‌ರನ್ನು ಕೇವಲ 53 ನಿಮಿಷಗಳ ಆಟದಲ್ಲಿ 6-1, 6-1 ಸೆಟ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿದ್ದಾರೆ.

ಈ ಋತುವಿನಲ್ಲಿ 50ನೆ ಗೆಲುವು ಸಾಧಿಸಿರುವ 2ನೆ ಶ್ರೇಯಾಂಕಿತೆ ಕೆರ್ಬರ್ ಮುಂದಿನ ಸುತ್ತಿನಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು ಎದುರಿಸಲಿದ್ದಾರೆ.

ಡೆನ್ಮಾರ್ಕ್‌ನ ವೋಝ್ನಿಯಾಕಿ ಮಾಜಿ ಚಾಂಪಿಯನ್ ಸ್ವೆತ್ಲಾನಾ ಕುಝ್ನೆಸೋವಾರನ್ನು ಎರಡನೆ ಸುತ್ತಿನ ಪಂದ್ಯದಲ್ಲಿ 6-3, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಫ್ರೆಂಚ್ ಓಪನ್ ಚಾಂಪಿಯನ್ ಗಾರ್ಬೈನ್ ಮುಗುರುಝರನ್ನು ಸೋಲಿಸಿ ವಿಶ್ವದ ಗಮನ ಸೆಳೆದಿದ್ದ ಲಾಟ್ವಿಯದ ಅನಸ್ಟಸಿಜಾ ಸೆವಾಸ್ಟೋವಾ ಉಕ್ರೇನ್‌ನ ಕಟೆರಿನಾ ಬಾಂಡರೆಂಕೊರನ್ನು 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿ ಇದೇ ಮೊದಲ ಬಾರಿ ಅಂತಿಮ-16 ಸುತ್ತಿಗೆ ತೇರ್ಗಡೆಯಾಗಿದ್ದಾರೆ.

2013ರಲ್ಲಿ ಸ್ವಲ್ಪ ಸಮಯ ಟೆನಿಸ್‌ನಿಂದ ನಿವೃತ್ತಿ ಪಡೆದಿದ್ದ ವಿಶ್ವದ ನಂ.48ನೆ ಆಟಗಾರ್ತಿ ಸೆವಾಸ್ಟೋವಾ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ 13ನೆ ಶ್ರೇಯಾಂಕಿತೆ ಜೊಹನ್ನಾ ಕಾಂಟಾರನ್ನು ಎದುರಿಸಲಿದ್ದಾರೆ. ಕಾಂಟಾ ಮತ್ತೊಂದು ಪಂದ್ಯದಲ್ಲಿ ಬೆಲಿಂಡಾ ಬೆನ್ಸಿಕ್‌ರನ್ನು 6-2, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News