ಶ್ರೀಲಂಕಾ ತಂಡಕ್ಕೆ ತರಂಗ ವಾಪಸ್
ಕೊಲಂಬೊ, ಸೆ.3: ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡ ಆಸ್ಟ್ರೇಲಿಯ ವಿರುದ್ಧದ ಐದನೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅನುಭವಿ ಬ್ಯಾಟ್ಸ್‌ಮನ್ ಉಪುಲ್ ತರಂಗರಿಗೆ ಕರೆ ನೀಡಿದೆ.
ರವಿವಾರ ನಡೆಯಲಿರುವ 5ನೆ ಏಕದಿನ ಪಂದ್ಯಕ್ಕೆ ಶ್ರೀಲಂಕಾ ತಂಡ ಬ್ಯಾಟ್ಸ್‌ಮನ್ ನಿರೋಶನ್ ಡಿಕ್‌ವೆಲ್ಲಾ ಹಾಗೂ ಆಲ್‌ರೌಂಡರ್ ದುಸುನ್ ಶನಕರನ್ನು 16 ಸದಸ್ಯರ ತಂಡದಲ್ಲಿ ಸೇರಿಸಿಕೊಂಡಿದೆ.
ಸ್ಪಿನ್ ಬೌಲರ್ ಲಕ್ಷಣ್ ಸಂಡಕನ್ ಹಾಗೂ ಆಲ್‌ರೌಂಡರ್ ತಿಸಾರ ಪೆರೇರ ರನ್ನು ತಂಡದಿಂದ ಹೊರಗಿಡಲಾಗಿದೆ.
ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ತರಂಗ ಶ್ರೀಲಂಕಾ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಇತ್ತೀಚೆಗೆ ಶ್ರೀಲಂಕಾ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ಏಳನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು ಉತ್ತಮ ಪ್ರದರ್ಶನ ನೀಡಿದ್ದರು.
ಆಸ್ಟ್ರೇಲಿಯ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿ ಈಗಾಗಲೇ ಸರಣಿಯನ್ನು ಗೆದ್ದುಕೊಂಡಿದೆ.