×
Ad

ಚತುಷ್ಕೋನ ಏಕದಿನ ಸರಣಿ ಜಯಿಸಿದ ಭಾರತ ‘ಎ’

Update: 2016-09-05 00:07 IST

ಹರ್ರಪ್ ಪಾರ್ಕ್, ಸೆ.4: ಭಾರತ ‘ಎ’ ತಂಡ ಇಲ್ಲಿ ನಡೆದ ಚತುಷ್ಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಆಸ್ಟ್ರೇಲಿಯ ‘ಎ’ ತಂಡದ ವಿರುದ್ಧ 57 ರನ್‌ಗಳ ಜಯ ಗಳಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ರೇ ಮಿಷಲ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 267 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ‘ಎ’ ತಂಡ 44.5 ಓವರ್‌ಗಳಲ್ಲಿ 209 ರನ್‌ಗಳಿಗೆ ಆಲೌಟಾಯಿತು.
   ಬೌಲರ್ ಯಜುವೆಂದ್ರ ಚಾಹಲ್(34ಕ್ಕೆ 4) ಮತ್ತು ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಆಸ್ಟ್ರೇಲಿಯಕ್ಕೆ ಸವಾಲು ಕಠಿಣವಾಗಿರದಿದ್ದರೂ ತಂಡದ ದಾಂಡಿಗರ ವೈಫಲ್ಯದಿಂದಾಗಿ ಸೋಲು ಅನುಭವಿಸಿತು. ಆಸ್ಟ್ರೇಲಿಯ ತಂಡದ ನಾಯಕ ಪೆಟೆ ಹ್ಯಾಂಡ್ಸ್‌ಕಾಂಬ್ (43) ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇನಿಂಗ್ಸ್ ಆರಂಭಿಸಿದ ಬ್ಯಾಂಕ್ರಾಫ್ಟ್ ಮತ್ತು ಪ್ಯಾಟರ್ಸನ್ ಮೊದಲ ವಿಕೆಟ್‌ಗೆ 6.4 ಓವರ್‌ಗಳಲ್ಲಿ 31 ರನ್ ಗಳಿಸುವ ಹೊತ್ತಿಗೆ ಧವಳ್ ಕುಲಕರ್ಣಿ ಅವರು ಪ್ಯಾಟರ್ಸನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಎರಡನೆ ವಿಕೆಟ್‌ಗೆ ಕ್ಯಾಮರೊನ್ ಬ್ಯಾಂಕ್ರಾಫ್ಟ್ ಮತ್ತು ನಿಕ್ ಮ್ಯಾಡಿನ್ಸನ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಎರಡನೆ ವಿಕೆಟ್‌ಗೆ 51 ರನ್‌ಗಳ ಜೊತೆಯಾಟ ನೀಡಿದರು. ಇವರ ಬ್ಯಾಟಿಂಗ್ ನೆರವಿನಲ್ಲಿ ತಂಡದ ಸ್ಕೋರ್ 19 ಓವರ್‌ಗಳಲ್ಲಿ 82ಕ್ಕೆ ಏರಿತು. ಅಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ಬ್ಯಾಂಕ್ರಾಫ್ಟ್ ಅವರು ಕರಣ್ ನಾಯರ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಮ್ಯಾಡಿನ್ಸನ್ 31 ರನ್ ಗಳಿಸಿ ನಾಯರ್‌ಗೆ ವಿಕೆಟ್ ಒಪ್ಪಿಸಿದರು. 24.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 91 ರನ್ ಮಾಡಿದ್ದ ಆಸ್ಟ್ರೇಲಿಯ ‘ಎ’ ತಂಡವನ್ನು ಆಧರಿಸಿದ ನಾಯಕ ಹ್ಯಾಂಡ್ಸ್‌ಕ್ಯಾಂಬ್ ಮತ್ತು ರಾಸ್ 4 ವಿಕೆಟ್‌ಗೆ 77 ರನ್ ಸೇರಿಸಿದರು. 35.4ನೆ ಓವರ್‌ನಲ್ಲಿ ಧವಳ್ ಕುಲಕರ್ಣಿ ಎಸೆತದಲ್ಲಿ ರಾಸ್(34) ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. 38.4ನೆ ಓವರ್‌ನಲ್ಲಿ ನಾಯಕ ಹ್ಯಾಂಡ್ಸ್‌ಕ್ಯಾಂಬ್(43) ಔಟಾದರು. ಬಳಿಕ ಆಸ್ಟ್ರೇಲಿಯ ಬ್ಯಾಟಿಂಗ್ ದುರ್ಬಲಗೊಂಡಿತು.
 ಚಾಹಲ್, ಧವಳ್ ಕುಲಕರ್ಣಿ(22ಕ್ಕೆ 2), ಅಕ್ಷರ್ ಪಟೇಲ್(33ಕ್ಕೆ 2), ಕರಣ್ ನಾಯರ್(29ಕ್ಕೆ 2) ದಾಳಿಗೆ ಸಿಲುಕಿದ ಆಸ್ಟ್ರೇಲಿಯ ‘ಎ’ ತಂಡ ಬೇಗನೆ ಇನಿಂಗ್ಸ್ ಮುಗಿಸಿತು.
 ಭಾರತ ‘ಎ’ 266/4: ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತ‘ಎ’ ತಂಡ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿತ್ತು.
   ಭಾರತ ‘ಎ’ ತಂಡ 1.4ನೆ ಓವರ್‌ನಲ್ಲಿ 2 ರನ್ ಗಳಿಸುವಷ್ಟರಲ್ಲಿ ಮೊದಲ ಕಳೆದುಕೊಂಡಿತ್ತು. ಕರಣ್ ನಾಯರ್ (1) ಅವರು ವಾರಲ್ ಎಸೆತದಲ್ಲಿ ಔಟಾದರು. ಎರಡನೆ ವಿಕೆಟ್‌ಗೆ ಮನ್‌ದೀಪ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ (41) ಅವರು 81 ರನ್ ಜಮೆ ಮಾಡಿದರು. ಮೂರನೆ ವಿಕೆಟ್‌ಗೆ ಮನ್‌ದೀಪ್ ಸಿಂಗ್ ಮತ್ತು ನಾಯಕ ಮನೀಷ್ ಪಾಂಡೆ (61) ಅವರು 81 ರನ್ ಸೇರಿಸಿ ತಂಡದ ಸ್ಕೋರ್‌ನ್ನು 36.2 ಓವರ್‌ಗಳಲಿ ್ಲ 170ಕ್ಕೆ ಏರಿಸಿದರು. ಮನ್‌ದೀಪ್ ಸಿಂಗ್ (95) ಶತಕದ ಹಾದಿಯಲ್ಲಿ ಎಡವಿದರು. ಅವರು ತಂಡ ಪರ ಗರಿಷ್ಠ ಸ್ಕೋರ್ ದಾಖಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೇದಾರ್ ಜಾಧವ್ ಔಟಾಗದೆ 25ರನ್ ಮತ್ತು ಅಕ್ಷರ್ ಪಟೇಲ್ ಔಟಾಗದೆ 22 ರನ್ ಗಳಿಸಿ ತಂಡದ ಸ್ಕೋರ್‌ನ್ನು ನಿಗದಿತ 50 ಓವರ್‌ಗಳಲ್ಲಿ 266ಕ್ಕೆ ತಲುಪಿಸುವಲ್ಲಿ ನೆರವಾದರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ‘ಎ’ 50 ಓವರ್‌ಗಳಲ್ಲಿ 266/4( ಮನ್‌ದೀಪ್ ಸಿಂಗ್ 95, ಮನೀಷ್ ಪಾಂಡೆ 61, ಶ್ರೇಯಸ್ ಅಯ್ಯರ್ 41; ಸ್ಟೋನಿಸ್ 30ಕ್ಕೆ1)
ಆಸ್ಟ್ರೇಲಿಯ ‘ಎ’ 44.5 ಓವರ್‌ಗಳಲ್ಲಿ ಆಲೌಟ್ 209( ಹ್ಯಾಂಡ್ಸ್‌ಕಾಂಬ್ 43, ಬ್ಯಾಂಕ್ರಾಫ್ಟ್ 34, ರಾಸ್ 34; ಚಾಹಲ್ 34ಕ್ಕೆ 4).
ಪಂದ್ಯಶ್ರೇಷ್ಠ:ಮನ್‌ದೀಪ್ ಸಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News