×
Ad

ಸುಶೀಲ್ ಕುಮಾರ್‌ಗೆ ಪದ್ಮಭೂಷಣ ನೀಡಲು ಕುಸ್ತಿ ಫೆಡರೇಶನ್ ಶಿಫಾರಸು

Update: 2016-09-06 18:30 IST

ಹೊಸದಿಲ್ಲಿ, ಸೆ.6: ಎರಡು ಬಾರಿ ಒಲಿಂಪಿಕ್ ಪದಕ ಜಯಿಸಿದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್‌ಗೆ ದೇಶದ ಅತ್ಯುನ್ನತ ಮೂರನೆ ನಾಗರಿಕ ಪುರಸ್ಕಾರ ಪದ್ಮ ಭೂಷಣಕ್ಕೆ ಭಾರತದ ಕುಸ್ತಿ ಫೆಡರೇಶನ್ ಶಿಫಾರಸು ಮಾಡಿದೆ.
ಸುಶೀಲ್ ಕೋಚ್ ಯಶ್ವೀರ್ ಸಿಂಗ್‌ಗೆ ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಮಹಿಳಾ ಕುಸ್ತಿಪಟು ಅಲ್ಕಾ ತೋಮರ್ ಅವರಿಗೂ ಪ್ರಶಸ್ತಿ ನೀಡುವಂತೆ ಭಾರತದ ಕುಸ್ತಿ ಫೆಡರೇಶನ್ ನಿಂದ ಶಿಫಾರಸು ಮಾಡಲಾಗಿದೆ .
ಸುಶೀಲ್ ಕುಮಾರ್ ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿದ ಕುಸ್ತಿಪಟು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು.
 
 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯದ ಕಾರಣದಿಂದಾಗಿ ಅವರು ಅರ್ಹತೆ ಪಡೆದಿರಲಿಲ್ಲ. ನರಸಿಂಗ್ ಯಾದವ್ ಅವರೊಂದಿಗೆ ಟ್ರಯಲ್ಸ್ ನಡೆಸಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರೂ, ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತ್ತು. ನರಸಿಂಗ್ ಯಾದವ್ ರಿಯೋಗೆ ಅರ್ಹತೆ ಪಡೆದಿದ್ದರೂ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಅವಕಾಶ ಕೈಜಾರಿತ್ತು. ಎರಡು ವರ್ಷಗಳ ಹಿಂದೆ ಪದ್ಮ ಪುರಸ್ಕಾರಕ್ಕೆ ಸುಶೀಲ್ ಕುಮಾರ್ ಅವರ ಹೆಸರು ಕೇಳಿ ಬಂದಿದ್ದರೂ, ಅವರಿಗೆ ಪ್ರಶಸ್ತಿ ಸಿಕ್ಕಿರಲಿಲ್ಲ.ಸರಕಾರ ಅವರ ಸಾಧನೆಯನ್ನು ಕಡೆಗಣಿಸಿತ್ತು.
 2006ರಲ್ಲಿ ಚೀನಾದ ಗುವಾಂಗ್‌ರೆದಲ್ಲಿ ನಡೆದ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಕುಸ್ತಿಪಟು ತೋಮರ್ ಕಂಚು ಜಯಿಸಿದ್ದರು. ದಿಲ್ಲಿಯಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಚಿನ್ನ ಪಡೆದಿದ್ದರು. 2007ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದ್ದರೂ ಅವರು ಹೆಚ್ಚು ಪ್ರಚಾರದಲ್ಲಿಲ್ಲ.
 ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ 15 ಬಾರಿ ಪ್ರಶಸ್ತಿ ಗೆದ್ದಿರುವ ಪಂಕಜ್ ಅಡ್ವಾಣಿ, ಶೂಟರ್ ಜಿತು ರಾಯ್ ಟೇಬಲ್ ಟೇನಿಸ್ ಆಟಗಾರ ಅಚಂತ ಶರತ್ ಕಮಾಲ್ ಅವರು ಪದ್ಮ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದಾರೆ.
 ಮಾಜಿ ನಂ.1 ಶೂಟರ್ ಜಿತು ರಾಯ್, ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಇತ್ತೀಚೆಗೆ ದೇಶದ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪುರಸ್ಕಾರ ರಾಜೀವ್ ಗಾಂಧಿ ಖೇಲ್‌ರತ್ನ ಪುರಸ್ಕಾರ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News