×
Ad

ಟ್ವೆಂಟಿ-20: ವಿಶ್ವ ದಾಖಲೆಯ ಮೊತ್ತ ಗಳಿಸಿದ ಆಸ್ಟ್ರೇಲಿಯ

Update: 2016-09-06 21:00 IST

ಪಲ್ಲ್ಲಿಕಲ್, ಸೆ.6: ಆಸ್ಟ್ರೇಲಿಯ ತಂಡ ಶ್ರೀಲಂಕಾ ವಿರುದ್ಧ ಮಂಗಳವಾರ ಇಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 263 ರನ್ ಗಳಿಸಿ ವಿಶ್ವ ದಾಖಲೆ ಮೊತ್ತ ಗಳಿಸಿತು. ನಿರೀಕ್ಷೆಯಂತೆಯೇ 85 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ ತಂಡ ಸ್ಟಾರ್ಕ್(3-26) ಹಾಗೂ ಬೊಲೆಂಡ್(3-26) ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತು.ನಾಯಕ ದಿನೇಶ್ ಚಾಂಡಿಮಲ್(58) ಗರಿಷ್ಠ ಸ್ಕೋರರ್ ಎನಿಸಿಕೊಂಡರು.

 ನಾಯಕ ವಾರ್ನರ್(28) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(ಔಟಾಗದೆ 145 ರನ್, 65 ಎಸೆತ, 14 ಬೌಂಡರಿ, 9 ಸಿಕ್ಸರ್)ಚೊಚ್ಚಲ ಶತಕ ಸಿಡಿಸಿ ಆಸ್ಟ್ರೇಲಿಯ ಟ್ವೆಂಟಿ-20ಯಲ್ಲಿ ಬೃಹತ್ ಮೊತ್ತ ಗಳಿಸಿದ ಮೊದಲ ತಂಡವೆಂಬ ಕೀರ್ತಿಗೆ ಭಾಜನರಾಗಲು ನೆರವಾದರು.

263 ರನ್ ಗಳಿಸಿದ ಆಸ್ಟ್ರೇಲಿಯ ತಂಡ ಶ್ರೀಲಂಕಾ 9 ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯೊಂದನ್ನು ಮುರಿಯಿತು. ಶ್ರೀಲಂಕಾ 2007ರಲ್ಲಿ ಕೀನ್ಯ ವಿರುದ್ಧ ಟ್ವೆಂಟಿ-20 ವಿಶ್ವಕಪ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತ್ತು.

 ವಾರ್ನರ್‌ರೊಂದಿಗೆ ಮೊದಲ ವಿಕೆಟ್‌ಗೆ 57 ರನ್ ಸೇರಿಸಿದ ಮ್ಯಾಕ್ಸ್‌ವೆಲ್ ಆ ಬಳಿಕ 3ನೆ ವಿಕೆಟ್‌ಗೆ ಹೆಡ್‌ರೊಂದಿಗೆ 109 ರನ್ ಜೊತೆಯಾಟ ನಡೆಸಿ ಲಂಕಾದ ಬೌಲರ್‌ಗಳನ್ನು ಸ್ಟೇಡಿಯಂನ ಮೂಲೆ ಮೂಲೆಗೆ ಅಟ್ಟಿದರು. ಟ್ವೆಂಟಿ-20ಯಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯದ 3ನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಕೇವಲ 11 ರನ್‌ಗಳಿಂದ ಸಹ ಆಟಗಾರ ಫಿಂಚ್ ಹೆಸರಲ್ಲಿದ್ದ ಗರಿಷ್ಠ ಟ್ವೆಂಟಿ-20 ಸ್ಕೋರರ್ ದಾಖಲೆ ಮುರಿಯುವುದರಿಂದ ವಂಚಿತರಾದರು. 2013ರಲ್ಲಿ ಇಂಗ್ಲೆಂಡ್‌ನ ವಿರುದ್ದ ಆ್ಯರೊನ್ ಫಿಂಚ್ 156 ರನ್ ಗಳಿಸಿದ್ದು, ಇದು ಟ್ವೆಂಟಿ-20ಯಲ್ಲಿ ದಾಖಲಾಗಿರುವ ಗರಿಷ್ಠ ವೈಯಕ್ತಿಕ ಸ್ಕೋರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News