×
Ad

ಯೋಗೇಶ್ವರ್‌ಗೆ ಚಿನ್ನದ ಯೋಗವಿಲ್ಲ...!

Update: 2016-09-06 21:15 IST

ಹೊಸದಿಲ್ಲಿ, ಸೆ.6: ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಭಾರತದ ಕುಸ್ತಿಪಟು ಯೋಗೇಶ್ವರ ದತ್‌ಗೆ ಚಿನ್ನ ದೊರೆಯಲು ಸಾಧ್ಯವಿಲ್ಲ ಎಂದು ಯುನೈಟೆಡ್ ವರ್ಲ್ಡ್‌ರೆಸ್ಲಿಂಗ್(ಯುಡಬ್ಲುಡಬ್ಲು) ಇಂದು ಸ್ಪಷ್ಟಪಡಿಸಿದೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 60 ಕೆ.ಜಿ.  ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಅಝರ್‌ಬೈಜಾನ್‌ನ ಪೈಲ್ವಾನ್ ತೊಗ್ರುಲ್ ಅಸ್ಗರೋವ್ ಅವರು ಉದ್ದೀಪನಾ ಮದ್ದು ಸೇವನಾ ನಿಯಮವನ್ನು ಉಲ್ಲಂಘಿಸಿಲ್ಲ. ಈ ಕಾರಣದಿಂದಾಗಿ ಅವರಿಂದ ಚಿನ್ನವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದೆ.

ಕಳೆದ ವಾರ ಅಸ್ಗರೋವ್ ಉದ್ದೀಪನಾ  ಮದ್ದು ಸೇವಿಸಿರುವುದು ಸ್ಪಷ್ಟಗೊಂಡಿರುವುದಾಗಿ ವರದಿಯಾಗಿತ್ತು. ಬೆಳ್ಳಿ ಜಯಿಸಿದ್ದ ರಶ್ಯದ ಬೆಸಿಕ್ ಕುದುಕೋವ್ ಉದ್ದೀಪನಾ ಮದ್ದು ಸೇವಿಸಿರುವುದು ಈ ಮೊದಲು ಸಾಬೀತಾಗಿತ್ತು. ಈ ಕಾರಣದಿಂದಾಗಿ ಯೋಗೇಶ್ವರ್‌ಗೆ ಬೆಳ್ಳಿ ಒಲಿಯುವುದು ಖಚಿತವಾಗಿತ್ತು. ಈ ಸುದ್ದಿಯ ಬೆನ್ನಲ್ಲೆ ಚಿನ್ನ ಗೆದ್ದುಕೊಂಡಿದ್ದ ಅಸ್ಗರೋವ್ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣಗೊಂಡಿರುವುದಾಗಿ ವರದಿಯಾಗಿತ್ತು.

ಬೆಳ್ಳಿ ಪದಕ ಸಿಗುವ ಸಾಧ್ಯತೆ ಕಂಡುಬಂದಾಗ ಯೋಗೇಶ್ವರ್ ತಮಗೆ ಬೆಳ್ಳಿ ಬೇಡ. ಆ ಪದಕವನ್ನು ಬೆಸಿಕ್ ಕುದುಕೋವ್ ಕುಟುಂಬ ಇಟ್ಟುಕೊಳ್ಳಲಿ ಎಂದು ಹೇಳಿದ್ದರು. ಕುದುಕೋವ್ ಅವರು  2013ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರಿಂದ ಪಡೆಯಲಾಗಿದ್ದ ಸ್ಯಾಂಪಲ್ ಪರೀಕ್ಷೆಯಲ್ಲಿ ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News