ಸ್ಪೇನ್ ತಂಡಕ್ಕೆ ನಡಾಲ್ ಸೇರ್ಪಡೆ
ಮ್ಯಾಡ್ರಿಡ್, ಸೆ.6: ಹೊಸದಿಲ್ಲಿಯಲ್ಲಿ ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಪಂದ್ಯದಲ್ಲಿ ಭಾರತ ವಿರುದ್ಧ ಆಡಲಿರುವ ಸ್ಪೇನ್‌ನ ಡೇವಿಸ್ ಕಪ್ ತಂಡದಲ್ಲಿ ರಫೆಲ್ ನಡಾಲ್‌ರನ್ನು ಆಯ್ಕೆ ಮಾಡಲಾಗಿದೆ.
ಡೇವಿಸ್‌ಕಪ್ ಸೆ.16 ರಿಂದ 18ರ ತನಕ ನಡೆಯಲಿದೆ. ಯುಎಸ್ ಓಪನ್‌ನಲ್ಲಿ ರವಿವಾರ ಫ್ರಾನ್ಸ್‌ನ ಲುಕಾಸ್ ಪೌಲಿ ವಿರುದ್ಧ ಸೋತಿದ್ದ ಐದನೆ ರ್ಯಾಂಕಿನ ನಡಾಲ್ 13ನೆ ರ್ಯಾಂಕಿನ ಡೇವಿಡ್ ಫೆರರ್‌ರೊಂದಿಗೆ ಸೇರ್ಪಡೆಯಾಗಿದ್ದಾರೆ.ನಡಾಲ್ ಹಾಗೂ ಫೆರರ್ ಸಿಂಗಲ್ಸ್ ಪಂದ್ಯವನ್ನು, ಫೆಲಿಸಿಯಾನೊ ಲೊಪೆಝ್ ಹಾಗೂ ಮಾರ್ಕ್ ಲೊಪೆಝ್ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ.
ಪ್ಲೇ-ಆಫ್ ಪಂದ್ಯ ಆಡಲು ಭಾರತಕ್ಕೆ ತೆರಳಲಿರುವ ಸ್ಪೇನ್ ತಂಡಕ್ಕೆ ರಫೆಲ್ ನಡಾಲ್ ಹಾಗೂ ಡೇವಿಡ್ ಫೆರರ್ ವಾಪಸಾಗಿರುವುದು ಅತ್ಯಂತ ದೊಡ್ಡ ಸುದ್ದಿಯಾಗಿದೆ ಎಂದು ಸ್ಪೇನ್‌ನ ಟೆನಿಸ್ ಫೆಡರೇಶನ್ ಮಂಗಳವಾರ ತಿಳಿಸಿದೆ.
ಕಳೆದ ತಿಂಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ವಿಭಾಗದಲ್ಲಿ ನಡಾಲ್ ಚಿನ್ನ ಪದಕವನ್ನು ಜಯಿಸಿದ್ದರು. ಮಣಿಗಂಟಿನ ಗಾಯದಿಂದಾಗಿ ರೊಲ್ಯಾಂಡ್ ಗ್ಯಾರೊಸ್ ಹಾಗು ವಿಂಬಲ್ಡನ್ ಟೂರ್ನಿಯಿಂದ ಹೊರಗುಳಿದಿದ್ದರು.
30ರ ಪ್ರಾಯದ ನಡಾಲ್ ಯುಎಸ್ ಓಪನ್‌ನ ನಾಲ್ಕನೆ ಸುತ್ತಿನಲ್ಲಿ 6-1, 2-6, 6-4, 3-6, 7-6(8/6) ಸೆಟ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. ನಡಾಲ್ ಟೂರ್ನಿಯಿಂದ ಬೇಗನೆ ಹೊರ ನಡೆದ ಕಾರಣ ಡೇವಿಸ್‌ಕಪ್‌ನಲ್ಲಿ ಸ್ಪೇನ್ ತಂಡದಲ್ಲಿ ಆಡುವ ಅವಕಾಶ ಲಭಿಸಿದೆ.
ಡೇವಿಸ್‌ಕಪ್‌ನಲ್ಲಿ ಭಾರತ ಹಾಗೂ ಸ್ಪೇನ್ ಎರಡನೆ ಬಾರಿ ಮುಖಾಮುಖಿಯಾಗುತ್ತಿವೆ. 1965ರ ಬಳಿಕ ಇದೇ ಮೊದಲ ಬಾರಿ ಆಡುತ್ತಿವೆ. ಐದು ಬಾರಿಯ ಡೇವಿಸ್ ಕಪ್ ಚಾಂಪಿಯನ್ ಸ್ಪೇನ್ ಮೂರು ಬಾರಿಯ ರನ್ನರ್ಸ್-ಅಪ್ ಭಾರತದ ವಿರುದ್ಧ 2-1 ಮುನ್ನಡೆಯ ದಾಖಲೆ ಹೊಂದಿದೆ.