ಒಲಿಂಪಿಯನ್ ಸಾಕ್ಷಿಗೆ ಸ್ಫೂರ್ತಿ ಸುಶೀಲ್‌ಕುಮಾರ್ ಅಲ್ಲ, ಇನ್ಯಾರು?
ಹೊಸದಿಲ್ಲಿ, ಸೆ.7: ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವ ಸಾಕ್ಷಿ ಮಲಿಕ್‌ರ ಈ ಸಾಧನೆಗೆ ಯಾವ ಅಥ್ಲೀಟ್ ಸ್ಫೂರ್ತಿ ಯಾಗಿದ್ದಾರೆನ್ನುವ ಬಗ್ಗೆ ಕುತೂಹಲವಿತ್ತು. ಆ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.
ಭಾರತದ ಪರ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರು ಸಾಕ್ಷಿಗೆ ಸ್ಫೂರ್ತಿಯಾಗಿರಬಹುದು ಎಂದು ಎಲ್ಲರೂ ನಂಬಿದ್ದರು. ಆದರೆ, ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಜಪಾನ್‌ನ ಕುಸ್ತಿಪಟು ಕಾಯೊರಿ ಇಕೊ ತನ್ನ ಸಾಧನೆಗೆ ಸ್ಫೂರ್ತಿ ಎಂದು ರೋಹ್ಟಕ್‌ನ ಕುಸ್ತಿತಾರೆ ಸಾಕ್ಷಿ ಬಹಿರಂಗಪಡಿಸಿದ್ದಾರೆ.
‘‘ಮಹಿಳೆಯರ ಕುಸ್ತಿಗೆ ಸಂಬಂಧಿಸಿ ಜಪಾನ್ ಅತ್ಯುತ್ತಮ ತಂಡವಾಗಿದೆ. ಜಪಾನ್‌ನಲ್ಲಿ ಕಾಯೊರಿ ಅವರಂತಹ ಕುಸ್ತಿಪಟುಗಳು ತಮ್ಮ ಜೀವನದಲ್ಲಿ ಪಾಠ ಕಲಿತು, ತರಬೇತಿ ನಡೆಸಿದ್ದಾರೆ ಎಂದು ನೋಡಿರುವೆ. ಜಪಾನ್‌ನ ಕುಸ್ತಿಪಟು ನನ್ನ ಮೇಲೆ ಭಾರೀ ಪ್ರಭಾವ ಬೀರಿದ್ದಾರೆ’’ ಎಂದು ಸಾಕ್ಷಿ ಹೇಳಿದ್ದಾರೆ.
ರಿಯೋದಲ್ಲಿ ಬಂಗಾರದ ಪದಕ ಜಯಿಸಿದ್ದ ಇಕೊ ಸತತ ನಾಲ್ಕು ಗೇಮ್ಸ್‌ಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿ ಇತಿಹಾಸ ಬರೆದಿದ್ದರು.
‘‘ಸ್ಪೇನ್ ಹಾಗೂ ಬಲ್ಗೇರಿಯದಲ್ಲಿ ನಡೆದ ಕುಸ್ತಿ ತರಬೇತಿ ಶಿಬಿರದ ವೇಳೆ ವಿದೇಶಿ ಕುಸ್ತಿಪಟುಗಳಿಂದ ತಾನು ಸಾಕಷ್ಟು ಪಾಠ ಕಲಿತಿರುವೆ’’ ಎಂದು ರಿಯೋ ಗೇಮ್ಸ್‌ನಲ್ಲಿ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬರ ನೀಗಿಸಿದ್ದ 23ರ ಪ್ರಾಯದ ಸಾಕ್ಷಿ ತಿಳಿಸಿದರು.