ಹಾಕಿ ಆಟಗಾರ್ತಿಯರ ‘ನರ್ಸರಿ’ ಜಾರ್ಖಂಡ್‌ನ ಗ್ರಾಮ ಹೆಸಲ್
ಜಾರ್ಖಂಡ್, ಸೆ.7: ಹರ್ಯಾಣದ ಮೊಖ್ರಾ ಖಾಸ್ ಒಲಿಂಪಿಕ್‌ನಲ್ಲಿ ಪದಕ ವಿಜೇತೆ ಸಾಕ್ಷಿ ಮಲಿಕ್‌ರಂತಹ ಹಲವು ಮಹಿಳಾ ಕುಸ್ತಿಪಟುಗಳನ್ನು ನೀಡಿದ ಹಳ್ಳಿಯಾಗಿ ಗುರುತಿಸಿಕೊಂಡಿದ್ದರೆ, ಜಾರ್ಖಂಡ್‌ನಲ್ಲಿರುವ ಬುಡಕಟ್ಟು ಸಮುದಾಯದವರೇ ಹೆಚ್ಚು ವಾಸಿಸುತ್ತಿರುವ ಹೆಸಲ್ ಎಂಬ ಹಳ್ಳಿ ಭಾರತದ ಹಾಕಿ ಆಟಗಾರ್ತಿಯರನ್ನು ತಯಾರುಗೊಳಿಸುತ್ತಿರುವ ‘ನರ್ಸರಿ’ ಆಗಿದೆ.
ರಾಜ್ಯ ರಾಜಧಾನಿ ರಾಂಚಿಯಿಂದ 50 ಕಿ.ಮೀ. ದೂರದಲ್ಲಿರುವ ಮಾವೋವಾದಿಗಳ ಪ್ರಾಬಲ್ಯ ಹೊಂದಿರುವ ಖುಂಟಿ ಜಿಲ್ಲೆಯಲ್ಲಿ ಈ ಹಳ್ಳಿಯಿದೆ. ಇತ್ತೀಚೆಗೆ ರಿಯೋ ಗೇಮ್ಸ್‌ನಲ್ಲಿ ಮಹಿಳಾ ಹಾಕಿ ತಂಡದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಒಲಿಂಪಿಯನ್ ನಿಕ್ಕಿ ಪ್ರಧಾನ್ ಸಹಿತ ಸುಮಾರು 20 ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿಯರು ಹೆಸಲ್ ಹಳ್ಳಿಯಿಂದ ಬಂದವರು.
1988ರ ಬಳಿಕ ಸುಮಾರು 55 ಬಾಲಕಿಯರು ವಿವಿಧ ವಯೋಮಿತಿಯ ಗುಂಪುಗಳಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಕನಿಷ್ಠ 20 ಬಾಲಕಿಯರು ಭಾರತ ತಂಡದೊಂದಿಗೆ ವಿದೇಶಕ್ಕೂ ತೆರಳಿದ್ದಾರೆ.
ಸುಮಾರು 60 ಕುಟುಂಬಗಳಿರುವ ಈ ಹಳ್ಳಿಯ ಪ್ರತಿಯೊಬ್ಬ ನಾಗರಿಕನ ರಕ್ತದಲ್ಲಿ ಹಾಕಿಯಿದೆ. ಕೃಷಿಯನ್ನೇ ನಂಬಿಕೊಂಡಿರುವ ಈ ಹಳ್ಳಿಯ ಪ್ರತಿ ಮನೆಯಲ್ಲೂ ಹಾಕಿ ಸ್ಟಿಕ್‌ಗಳಿವೆ. ಹುಡುಗಿಯರು ಹಾಕಿಯಲ್ಲಿ ಹೆಚ್ಚು ಒಲವು ಹೊಂದಿರುವ ಕಾರಣ ಈ ಹಳ್ಳಿಯಲ್ಲಿ ಮಹಿಳಾ ಆಟಗಾರ್ತಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
ಹುಡುಗಿಯರು ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಆಯ್ಕೆಯಾದರೆ, ತಕ್ಷಣವೇ ಪಾಸ್‌ಪೋರ್ಟ್ ಸಿದ್ಧಪಡಿಸುತ್ತಾರೆ. ಏಕೆಂದರೆ ಅವರಿಗೆ ಯಾವಾಗ ವಿದೇಶಕ್ಕೆ ತೆರಳಬಹುದೆಂದು ಗೊತ್ತಿರುವುದಿಲ್ಲ. ಬಿಡುವಿನ ವೇಳೆ ಹಾಕಿ ಅಭ್ಯಾಸ ನಡೆಸುವ ಇಲ್ಲಿನ ಮಕ್ಕಳಿಗೆ ಹಾಕಿ ಕ್ರೀಡೆಯೇ ಮನರಂಜನೆಯ ಮೂಲವಾಗಿದೆ.
ಈ ಎಲ್ಲ ಸಾಧ್ಯತೆಗಳಿಗೆ ಕಾರಣ ಹೆಸಲ್ ಹಳ್ಳಿಯ ಸರಕಾರಿ ಶಾಲೆಯ ಶಿಕ್ಷಕ ದಶರಥ್ ಮೆಹತೋ. ಮೆಹತೋ ಕಳೆದ ಎರಡು ದಶಕಗಳಿಂದ ಹೆಸಲ್‌ನ ಹುಡುಗಿಯರಿಗೆ ಹಾಕಿ ಕ್ರೀಡೆಯನ್ನು ಕಲಿಸಿಕೊಡುತ್ತಿದ್ದಾರೆ.
ಹೆಸಲ್‌ನಲ್ಲಿ ಹಾಕಿ ತರಬೇತಿಗೆ ಸರಿಯಾದ ವ್ಯವಸ್ಥೆಗಳಿಲ್ಲ. ಹುಡುಗಿಯರು ರಾಜ್ಯ ಹಾಗೂ ನ್ಯಾಶನಲ್ ತಂಡಗಳಿಗೆ ಆಯ್ಕೆಯಾದರೆ, ಹೆಚ್ಚಿನ ತರಬೇತಿಗೆ ಖುಂಟಿ ಅಥವಾ ರಾಂಚಿಗೆ ತೆರಳಬೇಕಾಗುತ್ತದೆ. ಜಿಲ್ಲಾ ಕೇಂದ್ರವಾಗಿರುವ ಖುಂಟಿಯಲ್ಲಿರುವ ಹಾಕಿ ಸ್ಟೇಡಿಯಂ ಸರಕಾರದಿಂದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ.
‘‘ಇಡೀ ಜಿಲ್ಲೆ ಅದರಲ್ಲೂ ಮುಖ್ಯವಾಗಿ ಹೆಸಲ್ ಶ್ಲಾಘನೆಗೆ ಯೋಗ್ಯವಾಗಿದೆ. ಈ ಹಳ್ಳಿ ಕಳೆದ ಒಂದು ದಶಕದಿಂದ ಅತ್ಯುತ್ತಮ ಆಟಗಾರ್ತಿಯರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ರಾಜ್ಯ ಹಾಗೂ ದೇಶಕ್ಕೆ ಗೌರವ ತರುವಂತಾಗಲು ಜಿಲ್ಲಾಡಳಿತ ಕ್ರೀಡಾಳುಗಳಿಗೆ ಮತ್ತಷ್ಟು ಬೆಂಬಲ ನೀಡುವ ಅಗತ್ಯವಿದೆ’’ ಎಂದು ಇತ್ತೀಚೆಗೆ ರಾಷ್ಟ್ರಪತಿಗಳಿಂದ ಧ್ಯಾನ್‌ಚಂದ್ ಪ್ರಶಸ್ತಿ ಪುರಸ್ಕೃತರಾಗಿರುವ ಮಾಜಿ ಒಲಿಂಪಿಯನ್ ಸಿಲ್ವನುಸ್ ಡುಂಗ್ ಡುಂಗ್ ಅಭಿಪ್ರಾಯಪಟ್ಟಿದ್ದಾರೆ.
‘‘ನಿರ್ಲಕ್ಷತನದಿಂದಾಗಿ ಜಾರ್ಖಂಡ್ ಹಾಕಿಯಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತಿಲ್ಲ. ನೆರೆಯ ಒಡಿಶಾ ರಾಜ್ಯದಲ್ಲಿ ಅಥ್ಲೀಟ್‌ಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಉತ್ತಮ ಆಟಗಾರರಾಗಲು ಬೆಂಬಲ ನೀಡಲಾಗುತ್ತಿದೆ’’ಎಂದು ಡುಂಗ್ ಡುಂಗ್ ಬೆಟ್ಟು ಮಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಹೆಸಲ್ ಹಳ್ಳಿಯ ಪ್ರಮುಖ ಆಟಗಾರ್ತಿಯರೆಂದರೆ: ಹೆಲೆನ್ ಸೊಯ್, ಸಾವಿತ್ರಿ ಪೂರ್ತಿ, ಬಿಶ್ವಾಸಿ ಪೂರ್ತಿ, ಆಲ್ಮಾ ಗುರಿಯಾ, ದಯಾಮಣಿ, ಪುಷ್ಪಾ ಪ್ರಧಾನ್, ಬಿಸ್ವಾಸಿ ಭೆಂಗ್ರಾ, ನಿಕ್ಕಿ ಪ್ರಧಾನ್, ಶಶಿ ಪ್ರಧಾನ್, ಸಲೊಮಿ ಪೂರ್ತಿ, ಗುಡ್ಡಿ ಕುಮಾರಿ, ಅನಿಮಾ ಸೊರೆಂಗ್ ಹಾಗೂ ಬಸಂತಿ ಕಚ್ಚಪ್.