ಯುಎಸ್ ಓಪನ್: ಜೊಕೊವಿಕ್,ವೋಝ್ನಿಯಾಕಿ, ಕೆರ್ಬರ್ ಸೆಮಿಫೈನಲ್‌ಗೆ

Update: 2016-09-07 17:53 GMT

ನ್ಯೂಯಾರ್ಕ್, ಸೆ.7: ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಳಿ ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗ ಗಾಯಾಳು ನಿವೃತ್ತಿಯಾದ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಸತತ 10ನೆ ಬಾರಿ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸೋಂಗ ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಾಗ ಜೊಕೊವಿಕ್ ವಿರುದ್ಧ 3-6, 2-6 ಸೆಟ್‌ಗಳ ಅಂತರದಿಂದ ಹಿನ್ನಡೆಯಲ್ಲಿದ್ದರು.

ಜೊಕೊವಿಕ್ ಯುಎಸ್ ಓಪನ್‌ನಲ್ಲಿ ಕಳೆದ 5 ಪಂದ್ಯಗಳಲ್ಲಿ ಮೂರನೆ ಬಾರಿ ಎದುರಾಳಿ ಆಟಗಾರ ಗಾಯಗೊಂಡ ಕಾರಣ ಮುಂದಿನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.3ನೆ ಸುತ್ತಿನಲ್ಲಿ ವಾಕ್ ಓವರ್ ಪಡೆದಿದ್ದ ಜೊಕೊವಿಕ್ ನಾಲ್ಕನೆ ಸುತ್ತಿನಲ್ಲಿ ಎದುರಾಳಿ ಮಿಖೈಲ್ ಯೂಝ್ನಿ ಕೂಡ ಗಾಯಾಳು ನಿವೃತ್ತಿಯಾಗಿದ್ದರು.

ಸರ್ಬಿಯದ ವಿಶ್ವದ ನಂ.1 ಆಟಗಾರ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಇನ್ನೋರ್ವ ಆಟಗಾರ ಗಾಯೆಲ್ ಮಾನ್‌ಫಿಲ್ಸ್‌ರನ್ನು ಎದುರಿಸಲಿದ್ದಾರೆ. ಮಾನ್‌ಫಿಲ್ಸ್ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮದೇ ದೇಶದ ಲುಕಾಸ್ ಪೌಲ್ಲಿ ಅವರನ್ನು 6-4, 6-3, 6-3 ನೇರ ಸೆಟ್‌ಗಳಿಂದ ಮಣಿಸಿದ್ದರು.

ಯುಎಸ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 89 ವರ್ಷಗಳ ಬಳಿಕ ಫ್ರಾನ್ಸ್‌ನ ಮೂವರು ಆಟಗಾರರು ಕ್ವಾರ್ಟರ್ ಫೈನಲ್‌ಗೆ ತಲುಪಿದ ಸಾಧನೆ ಮಾಡಿದ್ದರು. ಈ ಪೈಕಿ ಸೋಂಗ ಗರಿಷ್ಠ ಶ್ರೇಯಾಂಕ ಹೊಂದಿದ್ದರು.

12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ 2008ರ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ಮಾನ್‌ಫಿಲ್ಸ್‌ರನ್ನು ಕೊನೆಯ ಬಾರಿ ಎದುರಿಸಿದ್ದರು.

ಸೆಮಿಫೈನಲ್‌ನಲ್ಲಿ ವೋಝ್ನಿಯಾಕಿ-ಕೆರ್ಬರ್ ಮುಖಾಮುಖಿ:

ನ್ಯೂಯಾರ್ಕ್, ಸೆ.7: ವಿಶ್ವದ ಮಾಜಿ ನಂ.1 ಆಟಗಾರ್ತಿ ಕಾರೊಲಿನ್ ವೋಝ್ನಿಯಾಕಿ ಯುಎಸ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದು, ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸಲಿದ್ದಾರೆ.

ರಶ್ಯದ ಅನಸ್ಟಸಿಜಾ ಸೆವಾಸ್ಟೊವಾರನ್ನು 6-0, 6-2 ನೇರ ಸೆಟ್‌ಗಳಿಂದ ಮಣಿಸಿರುವ ವೋಝ್ನಿಯಾಕಿ ಯುಎಸ್ ಓಪನ್‌ನಲ್ಲಿ ನಾಲ್ಕನೆ ಬಾರಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್‌ಫೈನಲ್‌ನಲ್ಲಿ ಆಡಿದ ಸೆವಾಸ್ಟೋವಾ ಮೊದಲ ಸೆಟ್‌ನ ಎರಡನೆ ಗೇಮ್‌ನಲ್ಲಿ ಮಂಡಿನೋವಿಗೆ ತುತ್ತಾದ ಬಳಿಕ ಚೇತರಿಸಿಕೊಳ್ಳಲಿಲ್ಲ. 2009 ಹಾಗೂ 2014ರಲ್ಲಿ ಯುಎಸ್ ಓಪನ್‌ನಲ್ಲಿ ಫೈನಲ್ ತಲುಪಿದ್ದ ವೋಝ್ನಿಯಾಕಿ ಗಾಯದ ಸಮಸ್ಯೆ ಎದುರಿಸಿದ ಸೆವಾಸ್ಟೊವಾ ಬಗ್ಗೆ ಕನಿಕರ ವ್ಯಕ್ತಪಡಿಸಿದರು. ನನಗೆ ಈ ಹಿಂದೆ ಇದೇ ರೀತಿಯ ಗಾಯವಾಗಿತ್ತು. ಸೆವಾಸ್ಟೋವಾರಲ್ಲಿ ನಾನು ಕ್ಷಮೆ ಕೋರುವೆ ಎಂದರು.

ಮತ್ತೊಂದು ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೆರ್ಬರ್ ಇಟಲಿಯ ರಾಬರ್ಟ ವಿನ್ಸಿ ಅವರನ್ನು 7-5, 6-0 ಸೆಟ್‌ಗಳ ಅಂತರದಿಂದ ಸೋಲಿಸಿ ಯುಎಸ್ ಓಪನ್‌ನಲ್ಲಿ ಎರಡನೆ ಬಾರಿ ಸೆಮಿಫೈನಲ್‌ಗೆ ತಲುಪಿದರು. 2011ರಲ್ಲಿ ಅಂತಿಮ-4 ಹಂತ ತಲುಪಿದ್ದರು. ಸೆಮಿ ಫೈನಲ್‌ನಲ್ಲಿ ವೋಝ್ನಿಯಾಕಿಯನ್ನು ಎದುರಿಸಲಿರುವ ಕೆರ್ಬರ್ 7-5 ದಾಖಲೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News