×
Ad

ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ

Update: 2016-09-08 12:31 IST

ಮ್ಯಾಂಚೆಸ್ಟರ್, ಸೆ.8: ಇಂಗ್ಲೆಂಡ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ ಶಾರ್ಜೀಲ್ ಖಾನ್ ಹಾಗೂ ಖಾಲಿದ್ ಲತೀಫ್ ಪಾಕಿಸ್ತಾನ ತಂಡಕ್ಕೆ ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ತಂದುಕೊಟ್ಟರು. ಈ ಮೂಲಕ ಪಾಕ್ ತಂಡ ಇಂಗ್ಲೆಂಡ್ ಪ್ರವಾಸವನ್ನು ಗೆಲುವಿನೊಂದಿಗೆ ಕೊನೆಗೊಳಿಸಿತು.

ಇಲ್ಲಿನ ಓಲ್ಡ್ ಟ್ರಾಫೋರ್ಡ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವೇಗದ ಬೌಲರ್ ವಹಾಬ್ ರಿಯಾಝ್(3-18), ಇಮಾದ್ ವಾಸಿಂ(2-17) ಹಾಗೂ ಹಸನ್ ಅಲಿ(2-24) ಅಮೋಘ ಬೌಲಿಂಗ್‌ನ ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್‌ನ್ನು 135 ರನ್ ಗೆ ನಿಯಂತ್ರಿಸಿ ಗೆಲುವಿಗೆ ಸುಲಭ ಸವಾಲು ಪಡೆದಿತ್ತು.

 ಕೇವಲ 136 ರನ್ ಗುರಿ ಪಡೆದಿದ್ದ ಪಾಕಿಸ್ತಾನ ಇನ್ನೂ 31 ಎಸೆತಗಳು ಬಾಕಿ ಇರುವಾಗಲೇ ಒಂದು ವಿಕೆಟ್ ನಷ್ಟದಲ್ಲಿ 139 ರನ್ ಗಳಿಸಿತು.

  ಎಡಗೈ ಬ್ಯಾಟ್ಸ್‌ಮನ್ ಶಾರ್ಜೀಲ್ 59 ರನ್ ಗಳಿಸಿ ಔಟಾದರು. ಇನ್ನೋರ್ವ ಆರಂಭಿಕ ಬ್ಯಾಟ್ಸ್‌ಮನ್ ಲತೀಫ್ ಔಟಾಗದೆ 59 ರನ್ ಗಳಿಸಿದರು. ಲತೀಫ್‌ರೊಂದಿಗೆ ಮೊದಲ ವಿಕೆಟ್‌ಗೆ 69 ಎಸೆತಗಳಲ್ಲಿ 107 ರನ್ ಜೊತೆಯಾಟ ನಡೆಸಿದ ಶಾರ್ಜೀಲ್ 36 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿದರು.

ಟ್ವೆಂಟಿ-20ಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಲತೀಫ್ 42 ಎಸೆತಗಳನ್ನು ಎದುರಿಸಿದ್ದು 8 ಬೌಂಡರಿ, 2 ಸಿಕ್ಸರ್ ಬಾರಿಸಿ ಔಟಾಗದೆ 59 ರನ್ ಗಳಿಸಿದರು.

ಎಪ್ರಿಲ್‌ನಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಓವರ್‌ನಲ್ಲಿ ಸೋತಿದ್ದ ತಂಡವನ್ನೇ ಇಂಗ್ಲೆಂಡ್ ಕಣಕ್ಕಿಳಿಸಿತ್ತು.

ಪಾಕಿಸ್ತಾನ ಸರ್ಫರಾಝ್ ಅಹ್ಮದ್ ನಾಯಕತ್ವದಲ್ಲಿ ಟ್ವೆಂಟಿ-20ಯಲ್ಲಿ ಮೊದಲ ಜಯ ದಾಖಲಿಸಿತು. ಉಭಯ ತಂಡಗಳು ಟೆಸ್ಟ್ ಸರಣಿಯನ್ನು 2-2 ರಿಂದ ಡ್ರಾಗೊಳಿಸಿದ್ದವು. ಇಂಗ್ಲೆಂಡ್ ತಂಡ ಏಕದಿನ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತ್ತು.

 18 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ್ದ ವೇಗದ ಬೌಲರ್ ವಹಾಬ್ ರಿಯಾಝ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇಂಗ್ಲೆಂಡ್‌ನ ಇನಿಂಗ್ಸ್‌ನಲ್ಲಿ ಅಲೆಕ್ಸ್ ಹೇಲ್ಸ್(37),ರಾಯ್(21) ,ಬಟ್ಲರ್(16), ನಾಯಕ ಮೋರ್ಗನ್(14)ಹಾಗೂ ಮೊಯಿನ್ ಅಲಿ(13) ಎರಡಂಕೆ ಸ್ಕೋರ್ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 20 ಓವರ್‌ಗಳಲ್ಲಿ 135/7

(ಅಲೆಕ್ಸ್ ಹೇಲ್ಸ್ 37, ಜೇಸನ್ ರಾಯ್ 21, ರಿಯಾಝ್ 3-18)

ಪಾಕಿಸ್ತಾನ: 14.5 ಓವರ್‌ಗಳಲ್ಲಿ 139/1

(ಶಾರ್ಜೀಲ್ ಖಾನ್ 59, ಖಾಲಿದ್ ಲತೀಫ್ ಔಟಾಗದೆ 59, ರಶೀದ್ 1-29)

ಪಂದ್ಯಶ್ರೇಷ್ಠ: ವಹಾಬ್ ರಿಯಾಝ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News