×
Ad

ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಸ್ವಿಮ್ಮಿಂಗ್ ಚಾಂಪಿಯನ್ ಭಕ್ತಿ ಶರ್ಮ

Update: 2016-09-08 22:38 IST

ಮುಂಬೈ, ಸೆ.8: ಕೇವಲ ಒಂದು ಡಿಗ್ರಿ ಸೆಲ್ಶಿಯಸ್ ಉಷ್ಣಾಂಶವಿರುವ ಅಂಟಾರ್ಟಿಕ್ ಸಮುದ್ರದಲ್ಲಿ 1.4 ಮೈಲು ದೂರವನ್ನು 52 ನಿಮಿಷಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಭಾರತದ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್ ಭಕ್ತಿ ಶರ್ಮ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಭಾರತೀಯರಿಂದ ಆನ್‌ಲೈನ್‌ನ ಮೂಲಕ ಆರ್ಥಿಕ ನೆರವನ್ನು ನಿರೀಕ್ಷಿಸುತ್ತಿದ್ದಾರೆ.

26ರ ಪ್ರಾಯದ ರಾಜಸ್ಥಾನದ ಸ್ವಿಮ್ಮರ್ ಭಕ್ತಿ 2ರ ಪ್ರಾಯದಲ್ಲೇ ಈಜು ಆರಂಭಿಸಿದ್ದರು. ತನ್ನ ಫಾರ್ಮ್ ಹಾಗೂ ಲಯವನ್ನು ಕಾಯ್ದುಕೊಳ್ಳಲು ಉಪನಗರ ವಿಲೇಪಾರ್ಲೆಯಲ್ಲಿ ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ.

‘‘ನನ್ನ ತರಬೇತಿಯನ್ನು ಪೂರ್ಣಗೊಳಿಸಲು ಹಣಕಾಸು ಸಮಸ್ಯೆ ಎದುರಿಸುತ್ತಿರುವೆ. ಹಣಕ್ಕಾಗಿ ಆನ್‌ಲೈನ್ ಮೊರೆಹೋಗಿದ್ದು, ಜನತೆ ಈಗಾಗಲೇ ಎರಡೂವರೆ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಮುಂದಿನ 4 ವರ್ಷಗಳ ತಯಾರಿಗೆ 1.5 ಕೋ.ರೂ. ಅಗತ್ಯವಿದೆ. ನಾನು ಜನರಿಂದ ಹಣ ಸಂಗ್ರಹಿಸುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುವ ಮೊದಲು ಜನರಿಂದ ಹಣ ಸಂಗ್ರಹಿಸಿದ್ದೆ. 2020ರ ಒಲಿಂಪಿಕ್ಸ್‌ಗಾಗಿ ದೇಶದ ಜನರ ನೆರವಿನ ನಿರೀಕ್ಷೆಯಲ್ಲಿರುವೆ’’ ಎಂದು ಶರ್ಮ ತಿಳಿಸಿದ್ದಾರೆ.

 ‘‘2008ರಲ್ಲಿ ಓಪನ್ ವಾಟರ್ ಸ್ವಿಮ್ಮಿಂಗ್ ಒಲಿಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾಗಿದ್ದು, ಒಲಿಂಪಿಕ್ಸ್‌ನಲ್ಲಿ ಪದಕದ ನಿರೀಕ್ಷೆಯಲ್ಲಿರುವೆ. ನನ್ನ ತವರು ರಾಜ್ಯ(ರಾಜಸ್ಥಾನ)ನನಗೆ ಯಾವುದೇ ಆರ್ಥಿಕ ನೆರವು ನೀಡುತ್ತಿಲ್ಲ. ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಕೇಂದ್ರದ ನೆರವಿನ ನಿರೀಕ್ಷೆಯಲ್ಲಿರುವೆ’’ ಎಂದು ಭಕ್ತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News