ಡಿಸೆಂಬರ್‌ನಲ್ಲಿ ಸೈನಾ ಮತ್ತೆ ಕಣಕ್ಕೆ?
ಹೈದರಾಬಾದ್, ಸೆ.8: ಮಂಡಿನೋವಿನಿಂದ ಸಂಪೂರ್ಣ ಚೇತರಿಸಿಕೊಂಡು ಬಲಿಷ್ಠವಾಗಿ ಸ್ಪರ್ಧಾತ್ಮಕ ಟೂರ್ನಿಗಳಿಗೆ ಮರಳುವೆ ಎಂದು ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘‘ನಾನು ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ವಾಪಸಾಗಲು ಬಯಸಿದ್ದೇನೆ. ಮುಂದಿನ ಎರಡು-ಮೂರು ವರ್ಷಗಳಲ್ಲಲಿ ಕಳೆದ ಐದು-ಆರು ವರ್ಷಗಳಲ್ಲಿ ನೀಡಿದ್ದ ಪ್ರದರ್ಶನಕ್ಕಿಂತಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ನಲ್ಲಿ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ವಾಪಸಾಗುವೆ. ದುಬೈ ವರ್ಲ್ಡ್ ಸೂಪರ್ ಸರಣಿ ಫೈನಲ್ಸ್‌ನಲ್ಲಿ ಆಡುವೆ ಎಂದು ಸೈನಾ ಹೇಳಿದ್ದಾರೆ.
ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ರಿಯೋ ಒಲಿಂಪಿಕ್ಸ್‌ನಲ್ಲಿ ನಾಕೌಟ್ ಹಂತ ತಲುಪಲೂ ವಿಫಲರಾಗಿದ್ದರು. ಬಲಮಂಡಿನೋವಿನೊಂದಿಗೆ ಸ್ವದೇಶಕ್ಕೆ ವಾಪಸಾಗಿದ್ದ ಸೈನಾ ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಸೈನಾ ಮುಂಬರುವ ಜಪಾನ್, ಡೆನ್ಮಾರ್ಕ್ ಹಾಗೂ ಫ್ರಾನ್ಸ್ ಸೂಪರ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಇದು ಅವರ ರ್ಯಾಂಕಿಂಗ್‌ನ ಮೇಲೆ ಪ್ರತಿಕೂಲ ಪರಿಣಾಮಬೀರಬಹುದು. ಪ್ರಸ್ತುತ ಅವರು 9ನೆ ರ್ಯಾಂಕಿನಲ್ಲಿದ್ದಾರೆ.