ಯುಎಸ್ ಓಪನ್: ವಾವ್ರಿಂಕ, ನಿಶಿಕೋರಿ ಸೆಮಿಗೆ

Update: 2016-09-08 17:43 GMT

ನ್ಯೂಯಾರ್ಕ್, ಸೆ.8: ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ಮೂರನೆ ಶ್ರೇಯಾಂಕದ ಆಟಗಾರ ಸ್ವಿಟ್ಝರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕ, ಜಪಾನ್‌ನ ಕೀ ನಿಶಿಕೋರಿ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸೆಮಿ ಫೈನಲ್‌ನಲ್ಲಿ ವಾವ್ರಿಂಕ ಅವರು ಜಪಾನ್‌ನ ಕೀ ನಿಶಿಕೋರಿ ಅವರನ್ನು ಎದುರಿಸಲಿದ್ದಾರೆ. ಶುಕ್ರವಾರ ನಡೆಯಲಿರುವ ಇನ್ನೊಂದು ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರು ಫ್ರಾನ್ಸ್‌ನ ಗಾಯೆಲ್ ಮೊನ್‌ಫಿಲ್ಸ್ ಅವರನ್ನು ಎದುರಿಸಲಿದ್ದಾರೆ. ಬುಧವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಎರಡು ಬಾರಿ ಗ್ರಾಂಡ್‌ಸ್ಲಾಮ್ ಜಯಿಸಿರುವ ವಾವ್ರಿಂಕ ಅವರು ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೆಟ್ರೊ ವಿರುದ್ಧ 7-6(5), 4-6, 6-3, 6-2 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದರು.
ಡೆಲ್ ಪೆಟ್ರೊ ಅವರು 2009ರ ಯುಎಸ್ ಓಪನ್ ಚಾಂಪಿಯನ್. ಗಾಯದ ಕಾರಣದಿಂದಾಗಿ ಕಳೆದ ಗ್ರಾಂಡ್ ಸ್ಲಾಮ್‌ಗಳಲ್ಲಿ ಆಡಿರಲಿಲ್ಲ. ವಿಂಬಲ್ಡನ್‌ನಲ್ಲಿ ಆಡುವ ಮೂಲಕ ಟೆನಿಸ್‌ಗೆ ವಾಪಸಾಗಿದ್ದ ಡೆಲ್ ಪೆಟ್ರೊ ಅವರು ವಿಂಬಲ್ಡನ್‌ನಲ್ಲಿ ಎರಡನೆ ಸುತ್ತಿನಲ್ಲಿ ನಿರ್ಗಮಿಸಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.
ವಾವ್ರಿಂಕ 2014ರ ಆಸ್ಟ್ರೇಲಿಯನ್ ಓಪನ್ ಮತ್ತು 2015ರ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದಾರೆ. ‘‘ನನ್ನ ಪಾಲಿಗೆ ಅಪೂರ್ವ ಪಂದ್ಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ಡೆಲ್ ಪೆಟ್ರೊ ವಿರುದ್ಧ ಕಠಿಣ ಪಂದ್ಯವಾಗಿತ್ತು’’ ಎಂದು ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿರುವ ವಾವ್ರಿಂಕ, ಆತ ಅಚ್ಚರಿಯ ಆಟಗಾರ ಮತ್ತು ನನಗೆ ಅವರ ವಿರುದ್ಧ ಗೆಲುವಿನಿಂದ ಸಂತಸವಾಗಿದೆ ’’ ಎಂದರು.
 ಡೆಲ್ ಪೆಟ್ರೊ ಮೊದಲ ಸೆಟ್‌ನಲ್ಲಿ 4-1 ಅಂತರದಲ್ಲಿ ಮೇಲುಗೈ ಸಾಧಿಸಿದ್ದರು. ಬಳಿಕ ವಾವ್ರಿಂಕ ಅವರು ಡೆಲ್ ಪೆಟ್ರೊರನ್ನು ಹಿಂದಿಕ್ಕಿದರು. ಟೈಬ್ರೇಕರ್‌ನಲ್ಲಿ ಪೆಟ್ರೊ ಅವರು ಮಾಡಿದ ಮೂರು ತಪ್ಪುಗಳು ವಾವ್ರಿಂಕಗೆ ವರದಾನವಾಗಿ ಪರಿಣಮಿಸಿತು. 7-5 ಅಂತರದಲ್ಲಿ ಮುನ್ನಡೆ ಸಾಧಿಸಿದರು.
‘ಪ್ರಶಸ್ತಿ ಫೇವರಿಟ್’ ಬ್ರಿಟನ್‌ನ ಆ್ಯಂಡಿ ಮರ್ರೆಗೆ ಶಾಕ್
ನ್ಯೂಯಾರ್ಕ್, ಸೆ.8: ‘ಪ್ರಶಸ್ತಿ ಫೇವರಿಟ್’ ಬ್ರಿಟನ್‌ನ ಆ್ಯಂಡಿ ಮರ್ರೆಗೆ ಶಾಕ್ ನೀಡಿದ ಜಪಾನ್ ಆಟಗಾರ ಕೀ ನಿಶಿಕೋರಿ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ನಿಶಿಕೋರಿ ಅವರು ವಿಂಬಲ್ಡನ್ ಹಾಗೂ ಒಲಿಂಪಿಕ್ಸ್ ವಿನ್ನರ್ ಮರ್ರೆ ಅವರನ್ನು 1-6, 6-4, 4-6, 6-1, 1-7 ಸೆಟ್‌ಗಳ ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟವನ್ನು ತಲುಪಿದರು. ಗ್ರಾನ್‌ಸ್ಲಾಮ್‌ನ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಏಷ್ಯಾದ ಮೊದಲ ಟೆನಿಸ್ ಆಟಗಾರ ಎನಿಸಿಕೊಳ್ಳಲು ನಿಶಿಕೋರಿಗೆ ಇನ್ನು ಎರಡೇ ಪಂದ್ಯಗಳಲ್ಲಿ ಜಯ ಸಾಧಿಸಬೇಕಾಗಿದೆ.
ಮೂರು ವಾರಗಳ ಹಿಂದೆಯಷ್ಟೇ ರಿಯೋ ಒಲಿಂಪಿಕ್ಸ್‌ನ ಸೆಮಿ ಫೈನಲ್‌ನಲ್ಲಿ ನಿಶಿಕೋರಿ ಅವರು ಮರ್ರೆಗೆ ಸೋತಿದ್ದರು. ಇದೀಗ ಆ ಒಲಿಂಪಿಕ್ಸ್‌ನ ಸೆಮಿಫೈನಲ್ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದ್ದಾರೆ. ಈ ವರ್ಷ ವಿಂಬಲ್ಡನ್ ಟೂರ್ನಿ ಹಾಗೂ ಇತ್ತೀಚೆಗಷ್ಟೇ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ 2012ರ ಯುಎಸ್ ಓಪನ್ ಚಾಂಪಿಯನ್ ಮರ್ರೆ ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಆದರೆ, ನಿಶಿಕೋರಿ ವಿರುದ್ಧದ ಸುಮಾರು 4 ಗಂಟೆಗಳ ಕಾಲ ನಡೆದ 5 ಸೆಟ್‌ಗಳ ಮ್ಯಾರಥಾನ್ ಪಂದ್ಯದಲ್ಲಿ ಎರಡು ಸೆಟ್‌ನಲ್ಲಿ ಮೇಲುಗೈ ಸಾಧಿಸಿದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. 
ಮಹಿಳೆಯರ ಸಿಂಗಲ್ಸ್‌;ಸೆರೆನಾ ವಿಲಿಯಮ್ಸ್ ಸೆಮಿ ಫೈನಲ್‌ಗೆ 
ನ್ಯೂಯಾರ್ಕ್, ಸೆ.8: ರೊಮಾನಿಯದ ಸಿಮೊನಾ ಹಾಲೆಪ್‌ರನ್ನು 6-2, 4-6, 6-3 ಸೆಟ್‌ಗಳ ಅಂತರದಿಂದ ಮಣಿಸಿದ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಏಳನೆ ಯುಎಸ್ ಓಪನ್ ಕಿರೀಟ ಹಾಗೂ 23ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸೆರೆನಾ ಸೆಮಿಫೈನಲ್‌ನಲ್ಲಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಸುತ್ತಿನಲ್ಲಿ ಸೆಣಸಲಿರುವ ಕಾರೊಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ. ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಝೆಕ್ ಗಣರಾಜ್ಯದ ಪ್ಲಿಸ್ಕೋವಾ ಕ್ರೊಯೇಷಿಯದ 18ರ ಹರೆಯದ ಅನಾ ಕಾಂಜ್ಹು ಅವರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಮೊದಲ ಸೆಮಿಫೈನಲ್ ಪಂದ್ಯ ಆಡಲು ತುಂಬಾ ಉತ್ಸುಕನಾಗಿರುವೆ ಎಂದು ಕಳೆದ 17 ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಮೂರನೆ ಸುತ್ತು ದಾಟಲು ವಿಫಲರಾಗಿದ್ದ ಪ್ಲಿಸ್ಕೋವಾ ಹೇಳಿದ್ದಾರೆ. ಮಹಿಳೆಯರ ಮತ್ತೊಂದು ಸೆಮಿಫೈನಲ್‌ನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅವರು ವಿಶ್ವದ ಮಾಜಿ ನಂ.1 ಆಟಗಾರ್ತಿ ಕಾರೊಲಿನ್ ವೋಝ್ನಿಯಾಕಿ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಕೆರ್ಬರ್ ಶನಿವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ತೇರ್ಗಡೆಯಾದರೆ, ಸೆರೆನಾರನ್ನು ಎದುರಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News