ಡೇವಿಸ್‌ಕಪ್: ಬೋಪಣ್ಣ ಅಲಭ್ಯ

Update: 2016-09-10 17:59 GMT

ಹೊಸದಿಲ್ಲಿ, ಸೆ.11: ಯುಎಸ್ ಓಪನ್ ವೇಳೆ ಮಂಡಿನೋವಿಗೆ ಒಳಗಾಗಿದ್ದ ರೋಹನ್ ಬೋಪಣ್ಣ ಮುಂಬರುವ ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ-ಆಫ್ ಪಂದ್ಯದಿಂದ ಹೊರಗುಳಿದಿದ್ದಾರೆ. ಸ್ಪೇನ್ ತಂಡವನ್ನು ಎದುರಿಸಲಿರುವ ಭಾರತಕ್ಕೆ ಈ ಬೆಳವಣಿಗೆ ತೀವ್ರ ಹಿನ್ನಡೆಯಾಗಿದೆ.

ಯುಎಸ್ ಓಪನ್ ವೇಳೆ ತನಗೆ ಗಾಯವಾಗಿದ್ದು, ವೈದ್ಯರು ಎರಡು ವಾರ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿಯುವಂತೆ ಸಲಹೆ ನೀಡಿದ್ದಾರೆ ಎಂದು ರೋಹನ್ ಬೋಪಣ್ಣ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಸೆ.16-18ರ ತನಕ ಸ್ಪೇನ್ ವಿರುದ್ಧ ಹೊಸದಿಲ್ಲಿಯಲ್ಲಿ ನಡೆಯಲಿರುವ ಡೇವಿಸ್ ಕಪ್ ಪಂದ್ಯದಿಂದ ತನ್ನ ಹೆಸರನ್ನು ಹಿಂಪಡೆಯುವಂತೆ ವಿನಂತಿಸಿದ್ದಾರೆ. ಬೋಪಣ್ಣರ ಮನವಿಯನ್ನು ಪರಿಗಣಿಸಿ, ಸ್ವೀಕರಿಸಲಾಗಿದೆ ಎಂದು ಎಐಟಿಎ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಬೋಪಣ್ಣ ಯುಎಸ್ ಓಪನ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ 2ನೆ ಸುತ್ತಿನಲ್ಲಿ ಸೋತಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದರು.

‘‘ಬೋಪಣ್ಣ ಗಾಯಗೊಂಡಿರುವುದು ದುರದೃಷ್ಟಕರ. ಕ್ರೀಡೆಯಲ್ಲಿ ಗಾಯವಾಗುವುದು ಸಹಜ. ಆದರೆ, ಡೇವಿಸ್ ಕಪ್‌ಗೆ ಕೆಲವೇ ವಾರ ಬಾಕಿ ಇರುವಾಗ ಹೀಗೆ ಆಗಿದ್ದು ಬೇಸರದ ವಿಷಯ’’ಎಂದು ಭಾರತದ ಡೇವಿಸ್ ಕಪ್ ಕೋಚ್ ಝೀಶನ್ ಅಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News