×
Ad

ಯುಎಸ್ ಓಪನ್: ಜೊಕೊವಿಕ್-ವಾವ್ರಿಂಕ ಫೈನಲ್ ಫೈಟ್

Update: 2016-09-10 23:37 IST

ನ್ಯೂಯಾರ್ಕ್, ಸೆ.10: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸ್ವಿಸ್‌ನ ಸೂಪರ್‌ಸ್ಟಾರ್ ಸ್ಟಾನಿಸ್ಲಾಸ್ ವಾವ್ರಿಂಕರ ಸವಾಲು ಎದುರಿಸಲಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ 10ನೆ ಶ್ರೇಯಾಂಕದ ಫ್ರಾನ್ಸ್‌ನ ಗಾಯೆಲ್ ಮಾನ್‌ಫಿಲ್ಸ್‌ರನ್ನು 6-3, 6-2, 3-6, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ಮತ್ತೊಂದು ಸೆಮಿಫೈನಲ್‌ನಲ್ಲಿ ಮೂರನೆ ಶ್ರೇಯಾಂಕದ ವಾವ್ರಿಂಕ ಜಪಾನ್‌ನ ಕೀ ನಿಶಿಕೋರಿ ಅವರನ್ನು 4-6, 7-5, 6-4, 6-2 ಸೆಟ್‌ಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ತಲುಪಿದ್ದಾರೆ.

 ಜೊಕೊವಿಕ್ ಅವರು ವಾವ್ರಿಂಕ ವಿರುದ್ಧ 19-4 ದಾಖಲೆ ಹೊಂದಿದ್ದಾರೆ. ಆದರೆ, ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸ್ವಿಸ್ ಆಟಗಾರ ವಾವ್ರಿಂಕ, ಜೊಕೊವಿಕ್‌ಗೆ ಶಾಕ್ ನೀಡಿ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಇದೀಗ ಮತ್ತೊಮ್ಮೆ ಫೈನಲ್‌ನಲ್ಲಿ ಜೊಕೊವಿಕ್‌ರನ್ನು ಎದುರಿಸುವ ಅವಕಾಶ ಲಭಿಸಿದ್ದನ್ನು ಸ್ವಾಗತಿಸಿರುವ ವಾವ್ರಿಂಕ, ನೊವಾಕ್ ವಿರುದ್ಧ ಮತ್ತೊಮ್ಮೆ ಆಡುವುದು ತುಂಬಾ ವಿಶೇಷವಾದುದು ಎಂದಿದ್ದಾರೆ.

2008ರ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ ಬಳಿಕ ಎರಡನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಸುತ್ತಿನಲ್ಲಿ ಆಡಿರುವ ಮಾನ್‌ಫಿಲ್ಸ್ ಮೂರನೆ ಸೆಟ್‌ನ ಮೊದಲ ಗೇಮ್‌ನ್ನು ಕೈಚೆಲ್ಲಿದಾಗ 20,000 ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಂದ ಅಪಹಾಸ್ಯಕ್ಕೆ ಒಳಗಾದರು.

  ಜೊಕೊವಿಕ್ ಪ್ರಸ್ತುತ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳ ಪೈಕಿ ಎರಡು ಪಂದ್ಯವನ್ನು ಸಂಪೂರ್ಣ ಆಡಿದ್ದರು. ಒಂದು ಪಂದ್ಯದಲ್ಲಿ ಎದುರಾಳಿ ಆಟಗಾರನಿಂದ ವಾಕ್‌ಓವರ್ ಪಡೆದಿದ್ದ ಜೊಕೊವಿಕ್ ಇನ್ನೆರಡು ಪಂದ್ಯಗಳ ಮಧ್ಯದಲ್ಲೇ ಆಟಗಾರರು ಗಾಯಾಳು ನಿವೃತ್ತಿಯಾಗಿದ್ದರು.

ಮತ್ತೊಂದೆಡೆ, ವಾವ್ರಿಂಕ 17 ಗಂಟೆ, 54 ನಿಮಿಷಗಳ ಕಾಲ ಕೋರ್ಟ್‌ನಲ್ಲಿ ಸಮಯ ಕಳೆದಿದ್ದರು. ಇದರಲ್ಲಿ 3ನೆ ಸುತ್ತಿನ ಪಂದ್ಯದಲ್ಲಿನ ಸೇವಿಂಗ್ ಪಾಯಿಂಟ್ ಕೂಡಾ ಸೇರಿದೆ.

ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.2ನೆ ಆಟಗಾರ ಆ್ಯಂಡಿ ಮರ್ರೆ ಅವರನ್ನು ಐದು ಸೆಟ್‌ಗಳ ಅಂತರದಿಂದ ಮಣಿಸಿದ್ದ ಜಪಾನ್‌ನ ನಿಶಿಕೋರಿ ಫೈನಲ್‌ಗೆ ತಲುಪಿದ್ದರು. ಆದರೆ, ಸೆಮಿಫೈನಲ್‌ನಲ್ಲಿ ವಾವ್ರಿಂಕ ಸವಾಲಿಗೆ ಉತ್ತರಿಸಲು ವಿಫಲರಾದರು. ಯುಎಸ್ ಓಪನ್‌ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೆ ಬಾರಿ ಸೆಮಿ ಫೈನಲ್‌ಗೆ ತಲುಪಿರುವ ವಾವ್ರಿಂಕ ಈ ಬಾರಿ ಫೈನಲ್‌ಗೆ ತಲುಪಿದ್ದಾರೆ. 2014ರಲ್ಲಿ ಮರಿನ್ ಸಿಲಿಕ್‌ಗೆ ಸೋತು 2ನೆ ಸ್ಥಾನ ಪಡೆದಿದ್ದ ನಿಶಿಕೋರಿಗೆ ಈ ಬಾರಿ ಫೈನಲ್ ತಲುಪುವ ಅವಕಾಶ ಕೈತಪ್ಪಿಹೋಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News