ಮಾರಿಯಪ್ಪನ್, ವರುಣ್ ಸಾಧನೆಯ ಹಿಂದೆ ಕನ್ನಡಿಗ ಕೋಚ್ ಸತ್ಯನಾರಾಯಣ
ಚೆನ್ನೈ, ಸೆ.10: ರಿಯೋ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕವನ್ನು ಜಯಿಸಿ ವಿಶ್ವದ ಗಮನ ಸೆಳೆದಿರುವ ಮಾರಿಯಪ್ಪನ್ ತಂಗವೇಲು ಹಾಗೂ ವರುಣ್ ಭಾಟಿಯವರ ಸಾಧನೆಯ ಹಿಂದೆ ಕರ್ನಾಟಕದ ಕೋಚ್ ಸತ್ಯನಾರಾಯಣರ ಅಗಾಧ ಪರಿಶ್ರಮವಿದೆ.
1,500 ಹಾಗೂ 5,000 ಮೀ. ಓಟದಲ್ಲಿ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದ ಸತ್ಯನಾರಾಯಣ ಅವರು ಮಾರಿಯಪ್ಪನ್ ಹಾಗೂ ವರುಣ್‌ರನ್ನು ಒಲಿಂಪಿಕ್ಸ್‌ಗೆ ಚೆನ್ನಾಗಿ ತರಬೇತುಗೊಳಿಸಿದ್ದರು. ಮಾರಿಯಪ್ಪನ್‌ಗೆ ಮೈದಾನದಲ್ಲಿ ಸಲಹೆ ನೀಡಿದ್ದು ಮಾತ್ರವಲ್ಲ ವೈಯಕ್ತಿಕವಾಗಿ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸಿದ್ದರು. ಇದೀಗ ತನ್ನ ಪರಿಶ್ರಮಕ್ಕೆ ಪ್ರತಿಫಲ ಲಭಿಸಿದ್ದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
‘‘ಮಾರಿಯಪ್ಪನ್(ವಿಶ್ವದ ನಂ.1) ಹಾಗೂ ವರುಣ್(ವಿಶ್ವದ ನಂ.3) ರಿಯೋ ಗೇಮ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದರು.ಅವರಿಬ್ಬರೂ ತಮ್ಮ ರ್ಯಾಂಕಿಂಗ್‌ಗೆ ನ್ಯಾಯ ಒದಗಿಸಿದ್ದಾರೆ. ಮಾರಿಯಪ್ಪನ್ ಕುಟುಂಬ ಆರ್ಥಿಕವಾಗಿ ದುರ್ಬಲರಾಗಿದ್ದು, ನನಗೆ ಎಷ್ಟು ಸಾಧ್ಯವೋ ಅಷ್ಟು ಆರ್ಥಿಕ ನೆರವನ್ನೂ ಅವರಿಗೆ ನೀಡಿದ್ದೇನೆ. ಬಡವರ ಕಷ್ಟ ಏನೆಂದು ತನಗೆ ಚೆನ್ನಾಗಿ ಗೊತ್ತಿದೆ. ಕಷ್ಟದ ದಿನಗಳು ನನಗೆ ಪಾಠ ಕಲಿಸಿದೆ. ಇದು ಬೇರೆಯವರಿಗೆ ಸಹಾಯ ಮಾಡಲು ಪ್ರೇರೇಪಿಸಿದೆ’ಎಂದು ಬಾಲ್ಯದಲ್ಲಿ ತವರು ಪಟ್ಟಣ ಶಿವಮೊಗ್ಗದಲ್ಲಿ ಅಂಗಡಿಗಳಿಗೆ ಹೂ ಮಾರುತ್ತಾ ಜೀವನ ಸಾಗಿಸಿದ್ದ ಸತ್ಯನಾರಾಯಣ ಹೇಳಿದ್ದಾರೆ.
‘‘ನಾವು ಆ.15 ರಂದು ರಿಯೋಗೆ ತಲುಪಿದ್ದೆವು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದೆವು. ಹಾಲಿವುಡ್‌ನ ರಾಕಿ ಸಿನಿಮಾವನ್ನು ಮಾರಿಯಪ್ಪನ್ ಹಾಗೂ ವರುಣ್ ವೀಕ್ಷಿಸಿದ್ದರು. ಆ ಚಿತ್ರ ಅವರಿಗೆ ಉತ್ತೇಜನಕಾರಿಯಾಗಿ ಪರಿಣಮಿಸಿತ್ತು’’ ಎಂದು ಸತ್ಯನಾರಾಯಣ ಹೇಳಿದ್ದಾರೆ.