×
Ad

ಈಜಿಪ್ಟಿನ ಟೇಬಲ್ ಟೆನಿಸ್ ದಂತಕಥೆ ಇಬ್ರಾಹಿಂ ಅನ್ನು ಒಮ್ಮೆ ನೋಡಿ

Update: 2016-09-11 15:12 IST

ಈಜಿಪ್ಟಿನ ಇಬ್ರಾಹಿಂ ಹಮಡ್ಟೌ ಟೇಬಲ್ ಟೆನಿಸ್ ದೈತ್ಯ. ಈ ಪ್ಯಾರಾಲಂಪಿಯನ್ ತನ್ನ ಬಾಯಿಯಲ್ಲಿ ಟೇಬಲ್ ಟೆನಿಸ್ ರಾಕೆಟ್ ಹಿಡಿಯುತ್ತಾನೆ! ರಿಯೋ ಪ್ಯಾರಾಲಂಪಿಕ್ಸ್‌ನ ಅನೇಕ ವಿಶಿಷ್ಟತೆಗಳಲ್ಲಿ ಈತನೂ ಒಬ್ಬ. ರಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ದೈಹಿಕ ನ್ಯೂನತೆಗಳನ್ನು ಮೀರಿ ಬೆಳೆದ ಕ್ರೀಡಾ ಪ್ರತಿಭೆಗಳ ಹಲವು ಹೃದಯಂಗಮ ಕತೆಗಳಲ್ಲಿ ಈತನದೂ ಸೇರಿದೆ. ಇಂತಹ ಅಸಾಮಾನ್ಯ ಸಾಹಸ ತೋರಿಸಿದ ಕ್ರೀಡಾಳು ಇಬ್ರಾಹಿಂ ಈಜಿಪ್ಟಿನ ಡಮಿಯೆಟ್ಟಾ ನಗರದ ನಿವಾಸಿ.
10 ವರ್ಷ ವಯಸ್ಸಿನಲ್ಲೇ ರೈಲು ಅಪಘಾತದಲ್ಲಿ ಇಬ್ರಾಹಿಂ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ತಮ್ಮ ಚೊಚ್ಚಲ ಪ್ಯಾರಾಲಂಪಿಕ್ಸಲ್ಲಿ ಅವರು ಬ್ರಿಟಿಷ್ ಟೇಬಲ್ ಟೆನಿಸ್ ದಿಗ್ಗಜ ಡೇವಿಡ್ ವೆದರ್ ಹಿಲ್‌ಗೆ ಮತ್ತು ನಂತರ ಜರ್ಮನಿಯ ಥಾಮಸ್ ರೌ ಅವರ ಮುಂದೆ ಸೋತಿರುವುದೇನೋ ನಿಜ. ಆದರೆ ಪ್ಯಾರಾಲಂಪಿಕ್ಸ್‌ನ ಭಾಗವಾಗಿರುವುದೇ ಅವರ ವಿಶೇಷತೆ.
“ಈಜಿಪ್ಟಿನಿಂದ ಬಂದು ಚಾಂಪಿಯನ್ನರ ವಿರುದ್ಧ ಆಡುತ್ತಿರುವುದಕ್ಕೇ ಖುಷಿಯಾಗಿದೆ. ನನ್ನ ಸಂತೋಷವನ್ನು ಬಣ್ಣಿಸಲೇ ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಇಬ್ರಾಹಿಂ. ರೈಲು ಅಪಘಾತದ ನಂತರ ಮೂರು ವರ್ಷ ಇಬ್ರಾಹಿಂ ಮನೆಯೊಳಗೇ ಇದ್ದರು. ಕ್ರೀಡೆಯ ಮೂಲಕ ಅವರ ಹತಾಶೆಯನ್ನು ನೀಗಿಸಲು ಕುಟುಂಬದ ಮಿತ್ರರೊಬ್ಬರು ಅವರಿಗೆ ನೆರವಾಗಿದ್ದರು. ಫುಟ್‌ಬಾಲ್ ಆಟಗಾರನಾಗಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಟೇಬಲ್ ಟೆನಿಸ್ ಆರಿಸಿಕೊಂಡರು. 20 ವರ್ಷಗಳಿಂದ ಹೊಸಮೆಲ್ಡಿನ್ ಎಲ್ಶೌಬ್ರಿ ಬಳಿ ತರಬೇತು ಪಡೆಯುತ್ತಿದ್ದಾರೆ. “ಕೈಗಳಿಲ್ಲದೆ ಫುಟ್‌ಬಾಲ್ ಆಡುವುದು ಬಹಳ ಅಪಾಯಕಾರಿ. ಸ್ವತಃ ರಕ್ಷಣೆಗೆ ಏನೂ ಇರುವುದಿಲ್ಲ” ಎನ್ನುತ್ತಾರೆ ಹೊಸಮೆಲ್ಡಿನ್. ಇದೇ ಕಾರಣದಿಂದ ಇಬ್ರಾಹಿಂ ಟೇಬಲ್ ಟೆನಿಸ್ ಆರಿಸಿಕೊಂಡಿದ್ದರು. ತಮ್ಮ ತೋಳುಗಳ ಅಡಿಯಲ್ಲಿರುವ ಸಣ್ಣ ಗ್ರಿಪ್‌ನಲ್ಲಿ ರಾಕೆಟ್ ಹಿಡಿಯಲು ಮಾಡಿದ ಪ್ರಯತ್ನ ಫಲಿಸದೆ ಇದ್ದಾಗ ಅವರು ಬಾಯಿಯಲ್ಲಿ ರಾಕೆಟ್ ಹಿಡಿದರು. ಕೈಗಳಿಗೆ ಬಿಡುವಿಲ್ಲದಾಗ ಟಾರ್ಚನ್ನು ಬಾಯಲ್ಲಿ ಹಿಡಿಯುವಂತೆ ಇಬ್ರಾಹಿಂ ರಾಕೆಟ್ ಹಿಡಿಯುತ್ತಾರೆ. ಆದರೆ ವೇಗವಾಗಿ ಬರುವ ಚೆಂಡನ್ನು ನಿಭಾಯಿಸಲು ಹೀಗೆ ಬಾಯಲ್ಲಿ ಹಿಡಿಯುವ ರಾಕೆಟ್ ಶಕ್ತವಾಗುವುದು ಕಷ್ಟ. ಹಾಗಿದ್ದರೂ ಇಬ್ರಾಹಿಂ ಪ್ರಯತ್ನ ಬಿಡಲಿಲ್ಲ. ಸರ್ವ್ ಮಾಡಲು ಟೇಬಲ್ ಟೆನಿಸ್ ಆಟಗಾರರು ಬಾಲನ್ನು ಎಸೆಯಬೇಕು. ಬಾಯಿಂದ ಅದು ಮಾಡಲು ಸಾಧ್ಯವಿಲ್ಲದ ಕಾರಣ ಅವರು ಕಾಲನ್ನು ಬಳಸುತ್ತಾರೆ. ಬಲಗಾಲಿಗೆ ಶೂ ಹಾಕದೆ ಅದರಲ್ಲೇ ಬಾಲು ಎಸೆಯುತ್ತಾರೆ. ತಮ್ಮ ಬಲಿಷ್ಠ ಕುತ್ತಿಗೆಯನ್ನೇ ಅಲ್ಲಾಡಿಸಿ ಬಾಯನ್ನೇ ಕೈ ಮಾಡಿಕೊಂಡು ರಾಕೆಟ್ ಅತ್ತಿತ್ತ ಬೀಸುತ್ತಾರೆ. ಇದನ್ನು ಕಲಿಯಲು ಅವರಿಗೆ ಮೂರು ವರ್ಷ ಹಿಡಿದಿತ್ತು. ಕ್ರೀಡೆ ಕಲಿತ ಮೇಲೆ ಅವರು ಮತ್ತೆ ಶಾಲೆಗೆ ಹೋಗಿದ್ದರು, ಆತ್ಮವಿಶ್ವಾಸ ಬೆಳೆದಿತ್ತು. ಅವರ ಈ ಆಟದ ವೈಖರಿ ಯು ಟ್ಯೂಬ್‌ನಲ್ಲಿ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ ಸುಮಾರು 2.3 ದಶಲಕ್ಷ ಮಂದಿ ವೀಡಿಯೊ ನೋಡಿ ಮೆಚ್ಚಿಕೊಂಡಿದ್ದಾರೆ.
ಬ್ರಿಟಿಷ್ ಪ್ಯಾರಾಲಂಪಿಯನ್ ಡೇವಿಡ್ ಕೂಡ ಎಡಗಡೆಗೆ ಕ್ರಚ್ ಹಿಡಿದು ಟೇಬಲ್ ಟೆನಿಸ್ ಆಡುವವರು. 2012ರಲ್ಲಿ ಅವರು ಡೈವ್ ಮಾಡಿ ಗೆಲುವಿನ ಶಾಟ್ ಹೊಡೆದ ವೀಡಿಯೊ ಈಗಲೂ ಜನಪ್ರಿಯ. ಆದರೆ ಸ್ವತಃ ಅವರು ಈಜಿಪ್ಟ್ ಆಟಗಾರನನ್ನು ಹೊಗಳಿದ್ದಾರೆ. “ಅವರು ಟೇಬಲ್ ಟೆನಿಸ್ ದೈತ್ಯ. ನಾನೇ ಸ್ವತಃ ಒತ್ತಡದಲ್ಲಿ ಆಡುವವನು. ಆದರೆ ಇಬ್ರಾಹಿಂನಂತಹ ವ್ಯಕ್ತಿಗಳನ್ನು ನೋಡಿದಾಗ ನಾವು ಆತಂಕಪಡುವುದು ಸುಮ್ಮನೆ ಎಂದು ಅನಿಸುತ್ತದೆ. ಅವರು ತಮಗೆ ಸಾಧ್ಯವಾಗುವಂತೆ ಟೇಬಲ್ ಟೆನಿಸನ್ನು ಬಲಿಸಿಕೊಂಡಿದ್ದಾರೆ” ಎಂದಿದ್ದಾರೆ ಡೇವಿಡ್.
ಆದರೆ ಇಬ್ರಾಹಿಂ ಅವರ ದೈಹಿಕ ನ್ಯೂನತೆ ವಿಶೇಷವಾಗಿರುವ ಕಾರಣ ಅವರಿಗೆ ಸೂಕ್ತವಾದ ಜೋಡಿಯಾಗಿ ಯಾರ ಜೊತೆಗೂ ಆಡಲು ಸಿಗುವುದಿಲ್ಲ. ಹೀಗಾಗಿ ಕನಿಷ್ಠ ಒಂದು ಕೈ ಇರುವ ಎದುರಾಳಿ ಜೊತೆಗೇ ಅವರು ಆಡಬೇಕಿದೆ. ಬಾಯಿ ಬಳಸುವ ಆಟಗಾರ ಇಬ್ರಾಹಿಂ ಮಾತ್ರ ಎನ್ನುತ್ತಾರೆ ತರಬೇತುದಾರ. ಕನಿಷ್ಠ ಐದರಿಂದ ಆರು ಮಂದಿ ಬಾಯಿ ಬಳಸಿ ಟೇಬಲ್ ಟೆನಿಸ್ ಆಡುವವರು ಇದ್ದಿದ್ದಲ್ಲಿ ಸಮಾನ ಸ್ಪರ್ಧೆಗೆ ಅವಕಾಶವಿರುತ್ತಿತ್ತು. ಈಗ ಇಬ್ರಾಹಿಂ ತಮ್ಮ ನಗರದಲ್ಲಿಯೇ ಇಬ್ಬರು 10 ಮತ್ತು 12 ವರ್ಷದ ಕೈಗಳಿಲ್ಲದ ವ್ಯಕ್ತಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ತಮ್ಮದೇ ವರ್ಗ ಸೃಷ್ಟಿಸುವುದೂ ಅವರಿಂದ ಸಾಧ್ಯವಾಗಬಹುದು.

Full View

ಕೃಪೆ : www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News