‘ಗಂಭೀರ್‌ರನ್ನು ವಾಪಸ್ ಕರೆ ತನ್ನಿ’
ಗ್ರೇಟರ್‌ನೊಯ್ಡ, ಸೆ.11: ನಾಲ್ವರು ಯುವತಿಯರಿದ್ದ ಸಣ್ಣ ಗುಂಪು ದುಲೀಪ್ ಟ್ರೋಫಿ ಫೈನಲ್ ಪಂದ್ಯದ ನಡೆಯುತ್ತಿದ್ದಾಗ ಉರಿ ಬಿಸಿಲಿನಲ್ಲಿ ನಿಂತುಕೊಂಡು ತಮ್ಮ ನೆಚ್ಚಿನ ಹೀರೋ ಗೌತಮ್ ಗಂಭೀರ್‌ಗೆ ಬೆಂಬಲ ವ್ಯಕ್ತಪಡಿಸಿದರು.
ಅಸ್ಮಿತಾ, ಅರ್ಯಾಂಕಾ, ಸುರ್ಭಿ ಹಾಗೂ ಪ್ರಿಯಾ 20 ಅಡಿ ಉದ್ದದ ‘ಗಂಭೀರ್‌ರನ್ನು ವಾಪಸ್ ಕರೆ ತನ್ನಿ‘ ಎಂದು ಬರೆದಿದ್ದ ದೊಡ್ಡ ಬ್ಯಾನರ್‌ರನ್ನು ಹಿಡಿದುಕೊಂಡು ಬಿಸಿಲಿನಲ್ಲಿ ನಿಂತಿದ್ದರು. ಇದನ್ನು ಗಮನಿಸಿದ ಗಂಭೀರ್ ನಾಲ್ವರು ಯುವತಿಯರಿಗೆ ನೀರಿನ ಬಾಟಲ್ ನೀಡುವಂತೆ ಮೈದಾನದ ಸಿಬ್ಬಂದಿಗೆ ಸೂಚಿಸಿದರು. ಪಂದ್ಯದ ವೇಳೆ ಅಪರಿಚಿತ ವ್ಯಕ್ತಿಗಳನ್ನು ಭೇಟಿಯಾಗಬಾರದೆಂಬ ಎಸಿಯು ನಿಯಮ ಇರುವ ಕಾರಣ ಗಂಭೀರ್ ಆ ನಾಲ್ವರು ಯುವತಿಯರನ್ನು ಭೇಟಿಯಾಗಿ ಮಾತನಾಡಲಿಲ್ಲ.
ದುಲೀಪ್ ಟ್ರೋಫಿಯಲ್ಲಿ ಒಟ್ಟು 320 ರನ್ ಗಳಿಸಿರುವ ಗಂಭೀರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನಾಲ್ವರು ಕಾಲೇಜು ಹುಡುಗಿಯರು ಹಿಡಿದಿದ್ದ ಬ್ಯಾನರ್ ಸ್ಟೇಡಿಯಂನಲ್ಲಿದ್ದ ರಾಷ್ಟ್ರೀಯ ಆಯ್ಕೆಗಾರರಾದ ವಿಕ್ರಂ ರಾಥೋರ್ ಹಾಗೂ ಸಾಬಾ ಕರೀಂ ಗಮನ ಸೆಳೆಯಿತು. ಮುಖ್ಯ ಕೋಚ್ ಅನಿಲ್ ಕುಂಬ್ಳೆ ಕೂಡ ಆ ವೇಳೆ ಉಪಸ್ಥಿತರಿದ್ದರು.