ಇಂದು ಟೀಮ್ ಇಂಡಿಯಾ ಪ್ರಕಟ

Update: 2016-09-11 17:55 GMT

ಹೊಸದಿಲ್ಲಿ, ಸೆ.11: ಸಂದೀಪ್ ಪಾಟೀಲ್ ನೇತೃತ್ವದ ನಾಲ್ವರ ಸದಸ್ಯರ ಬಿಸಿಸಿಐ ಆಯ್ಕೆ ಸಮಿತಿ ಸೋಮವಾರ ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಿದೆ.

ಪಾಟೀಲ್ ನೇತೃತ್ವದ ವಿಕ್ರಮ್ ರಾಥೋರ್, ಸಾಬಾ ಕರೀಂ, ಎಂಎಸ್‌ಕೆ ಪ್ರಸಾದ್ ಹಾಗೂ ಗಗನ್ ಖೋಡಾ ಅವರನ್ನೊಳಗೊಂಡ ನಾಲ್ವರು ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿ ಇತ್ತೀಚೆಗೆ ವೆಸ್ಟ್‌ಇಂಡೀಸ್ ಆಯ್ಕೆ ಮಾಡಲಾಗಿರುವ 17 ಸದಸ್ಯರ ತಂಡವನ್ನು 15ಕ್ಕೆ ಕಡಿತಗೊಳಿಸುವ ಸಾಧ್ಯತೆಯಿದೆ. ಹೊಸಬರನ್ನು ಸೇರಿಸಿಕೊಳ್ಳುವ ಸಾಧ್ಯತೆಯೂ ಇಲ್ಲ.

ಮುರಳಿ ವಿಜಯ್, ಲೋಕೇಶ್ ರಾಹುಲ್ ಹಾಗೂ ಶಿಖರ್ ಧವನ್ ಅಗ್ರ ಮೂರು ಸ್ಥಾನದಲ್ಲೇ ಮುಂದುವರಿಯುವ ನಿರೀಕ್ಷೆಯಿದೆ. ಗೌತಮ್ ಗಂಭೀರ್ ದುಲೀಪ್ ಟ್ರೋಫಿಯಲ್ಲಿ 77, 90, 59 ಹಾಗೂ 94 ರನ್ ಗಳಿಸಿರುವ ಹೊರತಾಗಿಯೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ಕೊನೆಗೊಂಡ ವಿಂಡೀಸ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಕ್ರಮವಾಗಿ 251 ಹಾಗೂ 243 ರನ್ ಗಳಿಸಿ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿ ತಂಡಕ್ಕೆ ಆಸರೆಯಾಗಿದ್ದರು. ಭಾರತದ ಹೊರಗೆ ಚೇತೇಶ್ವರ ಪೂಜಾರ ಅವರ ಫಾರ್ಮ್ ಚಿಂತೆಗೀಡು ಮಾಡುತ್ತಿದೆ. ಇದೀಗ ದುಲೀಪ್ ಟ್ರೋಫಿಯಲ್ಲಿ ಬೆನ್ನುಬೆನ್ನಿಗೆ ಶತಕ ಬಾರಿಸಿರುವ ಪೂಜಾರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ನಿಶ್ಚಿತ.

ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆಯೋ ಎಂಬ ಪ್ರಶ್ನೆ ಉದ್ಬವಿಸಿದೆ. ವಿಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಸತತ ಶತಕವನ್ನು ಬಾರಿಸಿದ ಬಳಿಕ ರೋಹಿತ್ ಟೆಸ್ಟ್‌ನಲ್ಲಿ ಕರಾಮತ್ತು ತೋರಿಸಿಲ್ಲ. ಮೂರು ವರ್ಷಗಳಿಂದ ಅವರಿಗೆ ಟೆಸ್ಟ್‌ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ದೇಶೀಯ ಕ್ರಿಕೆಟ್ ಹಾಗೂ ಎ ತಂಡದ ಪ್ರವಾಸಿ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಮನೀಷ್ ಪಾಂಡೆ, ಶ್ರೇಯಸ್ ಐಯ್ಯರ್ ಹಾಗೂ ಕರುಣ್ ನಾಯರ್ ಭಾರತದ ಕದ ತಟ್ಟುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News