ಇಂಡಿಯಾ ಬ್ಲೂ ಬೃಹತ್ ಮೊತ್ತ, ಪೂಜಾರ ದ್ವಿಶತಕ

Update: 2016-09-11 17:57 GMT

ಗ್ರೇಟರ್‌ನೊಯ್ಡ, ಸೆ.11: ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ(256) ಬಾರಿಸಿದ ಭರ್ಜರಿ ದ್ವಿಶತಕದ ನೆರವಿನಿಂದ ಇಂಡಿಯಾ ಬ್ಲೂ ತಂಡ ಇಂಡಿಯಾ ರೆಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಬೃಹತ್ ಮೊತ್ತ ಗಳಿಸಿದೆ.

  ಪಂದ್ಯದ ಎರಡನೆ ದಿನವಾದ ರವಿವಾರ 3 ವಿಕೆಟ್‌ಗಳ ನಷ್ಟಕ್ಕೆ 362 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಡಿಯಾ ಬ್ಲೂ ತಂಡ 168.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 693 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.

111 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವನ್‌ಡೌನ್ ದಾಂಡಿಗ ಪೂಜಾರ ಔಟಾಗದೆ 256 ರನ್(363 ಎಸೆತ, 28 ಬೌಂಡರಿ) ಗಳಿಸಿದರು. ಪೂಜಾರ ಹಾಗೂ ಜಾಕ್ಸನ್(134 ರನ್) 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 243 ರನ್ ಜೊತೆಯಾಟ ನಡೆಸಿ ತಂಡ ಬೃಹತ್ ಮೊತ್ತ ಗಳಿಸಲು ಪ್ರಮುಖ ಪಾತ್ರ ವಹಿಸಿದರು.

ಬ್ಲೂ ತಂಡ 605 ರನ್ ಗಳಿಸಿದಾಗ ಜಾಕ್ಸನ್ ಸ್ಪಿನ್ನರ್ ಅಮಿತ್ ಮಿಶ್ರಾ ಬೌಲಿಂಗ್‌ನಲ್ಲಿ ಔಟಾದರು. ಜಾಕ್ಸನ್ ನಿರ್ಗಮಿಸಿದ ಬಳಿಕ ರವೀಂದ್ರ ಜಡೇಜ(48 ರನ್) ಅವರೊಂದಿಗೆ 6ನೆ ವಿಕೆಟ್‌ಗೆ 93ರನ್ ಸೇರಿಸಿದ ಪೂಜಾರ ತಂಡದ ಮೊತ್ತವನ್ನು 693 ರನ್‌ಗೆ ತಲುಪಿಸಿದರು. ಜಡೇಜ ಔಟಾದ ಬೆನ್ನಿಗೇ ನಾಯಕ ಗಂಭೀರ್ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಇಂಡಿಯಾ ರೆಡ್ ಪರ ಅಮಿತ್ ಮಿಶ್ರಾ(2-171) ಯಶಸ್ವಿ ಬೌಲರ್ ಎನಿಸಿಕೊಂಡರು.

 ಶನಿವಾರ ಆರಂಭವಾದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಟಾಸ್ ಜಯಿಸಿದ ಬ್ಲೂ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಗೌತಮ್ ಗಂಭೀರ್(94 ರನ್) ಹಾಗೂ ಮಾಯಾಂಕ್ ಅಗರವಾಲ್(57) ಮೊದಲ ವಿಕೆಟ್‌ಗೆ 144 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು.

ಈ ಇಬ್ಬರು ಔಟಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್(55) ಅರ್ಧಶತಕ ಬಾರಿಸಿದರು. ರೋಹಿತ್ ಶರ್ಮ 30 ರನ್ ಗಳಿಸಿ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಪೂಜಾರ ಹಾಗೂ ಜಾಕ್ಸನ್ ಇಂಡಿಯಾ ರೆಡ್ ಬೌಲರ್‌ಗಳನ್ನು ಚೆಂಡಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News