ಭಾರತ ‘ಎ’ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

Update: 2016-09-11 17:59 GMT

ಬ್ರಿಸ್ಬೇನ್, ಸೆ.11: ಇಲ್ಲಿ ರವಿವಾರ ಕೊನೆಗೊಂಡ ಮೊದಲನೆ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಬೇಕೆಂಬ ಭಾರತ ‘ಎ’ ತಂಡದ ಬೌಲರ್‌ಗಳ ಪ್ರಯತ್ನ ವ್ಯರ್ಥವಾಗಿದೆ. ನಾಲ್ಕನೆ ಹಾಗೂ ಅಂತಿಮ ದಿನದಾಟವಾದ ರವಿವಾರ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯ ‘ಎ’ ತಂಡ ಭಾರತೀಯರಿಗೆ ಗೆಲುವು ನಿರಾಕರಿಸಿತು.

ಭಾರೀ ಮಳೆ ಸುರಿದ ಕಾರಣ ಪಂದ್ಯ ತಡವಾಗಿ ಆರಂಭವಾಯಿತು. ಆದಾಗ್ಯೂ, ಶನಿವಾರ ಭಾರತ ‘ಎ’ ತಂಡ ನಿಗದಿಪಡಿಸಿದ್ದ 159 ರನ್ ಗುರಿಯನ್ನು ಆಸ್ಟ್ರೇಲಿಯ ಕೊನೆಗೂ ಯಶಸ್ವಿಯಾಗಿ ಬೆನ್ನಟ್ಟಿತು.

151 ಎಸೆತಗಳಲ್ಲಿ ಔಟಾಗದೆ 58 ರನ್ ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರೊನ್ ಬ್ಯಾಂಕ್ರಾಫ್ಟ್ ಆಸ್ಟ್ರೇಲಿಯವನ್ನು ಗೆಲುವಿನ ದಡ ಸೇರಿಸಿದರು. ಕ್ಯಾಮರೊನ್ ಇನಿಂಗ್ಸ್‌ನಲ್ಲಿ 12 ಬೌಂಡರಿಗಳಿದ್ದವು.

ಇಂದು ಬ್ಯಾಟಿಂಗ್ ಮುಂದುವರಿಸಿದ ಬಿಯು ವೆಬ್‌ಸ್ಟರ್ 87 ಎಸೆತಗಳಲ್ಲಿ 30 ರನ್ ಗಳಿಸಿ ವರುಣ್‌ಗೆ ಔಟಾದರು.

ಶನಿವಾರ ಮಳೆಯಿಂದಾಗಿ ಪಂದ್ಯ ನಿಂತಾಗ ಆಸ್ಟ್ರೇಲಿಯ ಎ ತಂಡಕ್ಕೆ ಆರು ವಿಕೆಟ್‌ಗಳ ನೆರವಿನಿಂದ 100 ರನ್ ಗಳಿಸುವ ಅಗತ್ಯವಿತ್ತು. ಭಾರತದ ಪರ ಶಾರ್ದೂಲ್ ಠಾಕೂರ್(3-42) ಯಶಸ್ವಿ ಬೌಲರ್ ಎನಿಸಿಕೊಂಡರು. ವರುಣ್ ಆ್ಯರೊನ್ 2 ವಿಕೆಟ್ ಪಡೆದರು.

ಆಸ್ಟ್ರೇಲಿಯ ‘ಎ’ ತಂಡದ ನಾಯಕ ಪೀಟರ್ ಹ್ಯಾಂಡ್ಸ್‌ಕಾಂಬ್ ಮೊದಲ ಇನಿಂಗ್ಸ್‌ನಲ್ಲಿ 93 ಎಸೆತಗಳಲ್ಲಿ 87 ರನ್ ಗಳಿಸಿದ ಹಿನ್ನೆಲೆಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಎರಡನೆ ಚತುರ್ದಿನ ಟೆಸ್ಟ್ ಪಂದ್ಯ ಗುರುವಾರ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್

 ಭಾರತ ಎ: 230 ಹಾಗೂ 156 ರನ್

ಆಸ್ಟ್ರೇಲಿಯ ಎ: 228 ಹಾಗೂ 57.3 ಓವರ್‌ಗಳಲ್ಲಿ 161/7

(ಕ್ಯಾಮರೊನ್ ಬ್ಯಾಂಕ್ರಾಫ್ಟ್ ಔಟಾಗದೆ 58, ಶಾರ್ದೂಲ್ ಠಾಕೂರ್ 3-42)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News