×
Ad

ಕೈಯಿಲ್ಲದಿದ್ದರೂ ಕಾಲಲ್ಲಿ ಸರಿಯಾಗಿ ಗುರಿ ಇಡಬಲ್ಲ ಅಮೆರಿಕದ ಆರ್ಚರಿ ಪಟು ಮ್ಯಾಟ್ ಸ್ಟಝ್‌ಮನ್

Update: 2016-09-15 23:30 IST

ರಿಯೋ ಡಿಜನೈರೊ, ಸೆ.15: ಅಮೆರಿಕದ ಪ್ಯಾರಾಲಿಂಪಿಕ್ಸ್ ಸ್ಟಾರ್ ಆರ್ಚರಿ ಮ್ಯಾಚ್ ಸ್ಟಝ್‌ಮನ್ ಹುಟ್ಟುವಾಗಲೇ ಕೈಯಿಲ್ಲದಿದ್ದರೂ ಕಾಲಿನ ನೆರವಿನಿಂದ ಚೆನ್ನಾಗಿ ಗುರಿಇಟ್ಟು ಗಿನ್ನೆಸ್ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.

ಕೈಗಳಿಲ್ಲದ ಮ್ಯಾಟ್ 2009ರಲ್ಲಿ ಬಿಲ್ಲುಗಾರಿಕೆಯನ್ನು ವೃತ್ತಿಯಾಗಿ ಆಯ್ದುಕೊಂಡರು. ಮೊದಲ ಬಾರಿ ಅವರು ಬಿಲ್ಲನ್ನು ಖರೀದಿಸಲು ಅಂಗಡಿಯೊಂದಕ್ಕೆ ಹೋದಾಗ ಅಂಗಡಿಯವರು ಅವರನ್ನು ಅಚ್ಚರಿಯಿಂದ ಕಂಡಿದ್ದರು. ನೀನು ಬಿಲ್ಲನ್ನು ಹೇಗೆ ಗುರಿ ಇಡುವೆ ಎಂದು ಹೀಯಾಳಿಸಿದ್ದರು.

ಜನರ ಟೀಕೆಗೆ ಕಿವಿಗೊಡದ ಮ್ಯಾಟ್ ಆನ್‌ಲೈನ್‌ನಲ್ಲಿ ಬಿಲ್ಲುಗಾರಿಕೆಯ ಬಗ್ಗೆ ಮಾಹಿತಿ, ಸಲಹೆಯನ್ನು ಕಲೆಹಾಕಿದರು. ಕಾಲಿನಲ್ಲಿ ಚೆನ್ನಾಗಿ ಬರೆಯುವ, ಶೇವ್ ಮಾಡಿಕೊಳ್ಳಲು ಶಕ್ತರಾಗಿರುವ ಮ್ಯಾಟ್, ಕಾಲಿನ ಬಲದಲ್ಲಿ ಡ್ರೈವ್ ಕೂಡ ಮಾಡುತ್ತಾರೆ.

‘‘ನಾನು ಎಲ್ಲವನ್ನೂ ಮಾಡಬಲ್ಲೆನೆಂಬ ಆತ್ಮವಿಶ್ವಾಸ ಮೂಡಿತ್ತು. ನಾನು ಎರಡೇ ನಿಮಿಷದಲ್ಲಿ ಶೂ ಕಟ್ಟಬಲ್ಲೆ. ನಾನು ಮೊದಲ ಟೂರ್ನಿಯಲ್ಲಿ ಸ್ಪರ್ಧಿಸಿದಾಗ ಕೈಯಿಲ್ಲದ ಸ್ಪರ್ಧಿಗಳು ಯಾರೂ ಇರಲಿಲ್ಲ. ಅಲ್ಲಿ ನಾನೊಬ್ಬನೇ ಪ್ಯಾರಾಅಥ್ಲೀಟ್ ಆಗಿದ್ದೆ’’ ಎಂದು ಮ್ಯಾಟ್ ಹೇಳುತ್ತಾರೆ.

ಕಳೆದ ವರ್ಷ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದ ಮ್ಯಾಟ್ 283.47 ಮೀ.ದೂರದಿಂದ ಸರಿಯಾಗಿ ಗುರಿ ಇಟ್ಟು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಬಲಗಾಲಿನಲ್ಲಿ ಬಿಲ್ಲನ್ನು ಹಿಡಿದು ಸರಿಯಾಗಿ ಗುರಿಯಿಡುವ ಅವರು ಕಳೆದ 7 ವರ್ಷಗಳಿಂದ ಆರ್ಚರಿಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News