ಆಸ್ಟ್ರೇಲಿಯದ ಸ್ಪೆಷಲಿಸ್ಟ್ ಬ್ಯಾಟಿಂಗ್ ಕೋಚ್ ಆಗಿ ಗ್ರೇಮ್ ಹಿಕ್ ಆಯ್ಕೆ
ಸಿಡ್ನಿ, ಸೆ.15: ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಗ್ರೇಮ್ ಹಿಕ್ ಗುರುವಾರ ಆಸ್ಟ್ರೇಲಿಯದ ಸ್ಪೆಷಲಿಸ್ಟ್ ಬ್ಯಾಟಿಂಗ್ ಕೋಚ್ ಆಗಿ ಭಡ್ತಿ ಪಡೆದಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯಲ್ಲಿ ತನ್ನ ಕೋಚಿಂಗ್ ವೃತ್ತಿ ಆರಂಭಿಸಲಿದ್ದಾರೆ.
ಇಂಗ್ಲೆಂಡ್‌ನ ಪರ 65 ಟೆಸ್ಟ್ ಹಾಗೂ 120 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಹಿಕ್, 2013ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯದ ಉನ್ನತ ಪ್ರದರ್ಶನ ಅಧಿಕಾರಿಯಾಗಿ ನೇಮಕಗೊಂಡಿದ್ದರು.
‘‘ಇತ್ತೀಚೆಗೆ ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಗ್ರೇಮ್ ಹಿಕ್ ನಮ್ಮ್‌ಂದಿಗೆ ಕಾರ್ಯನಿರ್ವಹಿಸಿದ್ದರು. ಅವರ ಕೆಲಸ ನಮ್ಮೆಲ್ಲರ ಮೇಲೆ ಪ್ರಭಾವಬೀರಿದೆ. ಎಲ್ಲ ವಾತಾವರಣದಲ್ಲೂ ಅವರು ಅನುಭವಿ ಆಟಗಾರ. ಅವರು ನಮ್ಮ ತಂಡಕ್ಕೆ ಸಾಕಷ್ಟು ಲಾಭ ತಂದುಕೊಡಲಿದ್ದಾರೆ. ಮುಂಬರುವ ದಿನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಆ್ಯಶಸ್ ಸರಣಿ ಹಾಗೂ ಐಸಿಸಿ ವಿಶ್ವಕಪ್‌ನ್ನು ಇಂಗ್ಲೆಂಡ್‌ನಲ್ಲೇ ಆಡಲಿದ್ದೇವೆ. ಆಗ ಅವರ ಜ್ಞಾನ ನಮಗೆ ನೆರವಿಗೆ ಬರಲಿದೆ’’ ಎಂದು ಆಸ್ಟ್ರೇಲಿಯದ ಮುಖ್ಯ ಕೋಚ್ ಡರೆನ್ ಲೆಹ್ಮನ್ ಹೇಳಿದ್ದಾರೆ.
1987ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದ ಹಿಕ್ ಅವರು ಇತ್ತೀಚೆಗೆ ಏಕದಿನ ಸರಣಿ ಆಡಲು ಆಸ್ಟ್ರೇಲಿಯ ತಂಡ ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಂಡಿದ್ದಾಗ ಲೆಹ್ಮನ್ ಅನುಪಸ್ಥಿತಿಯಲ್ಲಿ ಆಸೀಸ್‌ಗೆ ಸಹಾಯಕ ಕೋಚ್ ಆಗಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 136 ಶತಕಗಳ ಸಹಿತ 41,112 ರನ್ ಗಳಿಸಿರುವ ಹಿಕ್ 2008ರಲ್ಲಿ ನಿವೃತ್ತಿಯಾಗಿದ್ದರು. ಇದೀಗ 2020ರ ತನಕ ಆಸ್ಟ್ರೇಲಿಯದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಆಸ್ಟ್ರೇಲಿಯ ತಂಡ ಸೆ.30 ರಂದು ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಎದುರಿಸಲಿದೆ.