ಸಾಯ್ ಅಧಿಕಾರಿಗಳ ಎಡವಟ್ಟಿನಿಂದ ಸುಂದರ್ ಕೈತಪ್ಪಿದ ಪದಕ?
ಹೊಸದಿಲ್ಲಿ, ಸೆ.16: ರಿಯೋ ಪ್ಯಾರಾಲಿಂಪಿಕ್ಸ್‌ನ ಎಫ್-46 ವಿಭಾಗದ ಜಾವೆಲಿನ್ ಎಸೆತದಲ್ಲಿ ದೇವೇಂದ್ರ ಜಜಾರಿಯಾ 63.97 ಮೀ. ದೂರ ಜಾವೆಲಿನ್ ಎಸೆದು ಚಿನ್ನದ ಪದಕವನ್ನು ಜಯಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ, ಇದೇ ವಿಭಾಗದಲ್ಲಿ ಸ್ಪರ್ಧಿಸಬೇಕಾಗಿದ್ದ ಭಾರತದ ಇನ್ನೋರ್ವ ಸ್ಪರ್ಧಿ ಸುಂದರ್ ಗುರ್ಜರ್ ಸಾಯ್ ಅಧಿಕಾರಿಗಳ ಎಡವಟ್ಟಿನಿಂದಾಗಿ ಒಲಿಂಪಿಕ್ಸ್ ಪದಕ ವಂಚಿತರಾಗಿದ್ದಾರೆ ಎನ್ನಲಾಗಿದೆ.
ಚಿನ್ನದ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದ ಸುಂದರ್ ಸ್ಪರ್ಧೆಯ ಆರಂಭವಾಗುವ ಸಮಯಕ್ಕೆ ಸರಿಯಾಗಿ ಹಾಜರಾಗದೇ ಇದ್ದ ಕಾರಣ ಸ್ಪರ್ಧೆಯಿಂದ ಅನರ್ಹಗೊಂಡಿದ್ದರು. ಪ್ರಾಕ್ಟೀಸ್‌ನ ವೇಳೆ ಸುಂದರ್ 70 ಮೀ. ದೂರಕ್ಕೆ ಜಾವೆಲಿನ್ ಎಸೆದಿದ್ದರು. ಹೀಗಾಗಿ ಅವರು ಸ್ಪರ್ಧೆಯಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆಯೂ ಇತ್ತು.
ಭಾರತದ ಕ್ರೀಡಾ ಪ್ರಾಧಿಕಾರದ(ಸಾಯ್) ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸುಂದರ್, ಕೋಚ್ ದೀಪಕ್ ಭಾರದ್ವಾಜ್ ವಿರುದ್ದವೂ ಅಸಮಾಧಾನ ವ್ಯಕ್ತಪಡಿಸಿದರು. ಭಾರಧ್ವಾಜ್ ಗೇಮ್ಸ್‌ನ ನಿಯಮದ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ. ''ಗೇಮ್ಸ್‌ನಲ್ಲಿ ನಡೆದ ಘಟನೆ ನನಗೆ ತುಂಬಾ ನೋವುಂಟು ಮಾಡಿದೆ. ನಾನು ಈಗಲೂ ಏನೂ ಆಹಾರ ಸೇವಿಸಿಲ್ಲ. ನನಗೆ ಇಂಗ್ಲೀಷ್ ಅರ್ಥವಾಗುವುದಿಲ್ಲ. ಆ ಭಾಷೆಯನ್ನು ಓದಲು ಹಾಗೂ ಬರೆಯಲು ಬರುವುದಿಲ್ಲ. ನಾನು ಸಂಪೂರ್ಣವಾಗಿ ಕೋಚ್‌ರನ್ನೇ ಅವಲಂಬಿಸಿದ್ದೆ. ಆದರೆ, ಅವರು ನನಗೆ ದ್ರೋಹ ಎಸೆಗಿದರು. ಭಾರದ್ವಾಜ್ ನನ್ನ ವೈಯಕ್ತಿಕ ಕೋಚ್ ಆಗಿರಲಿಲ್ಲ. ಸಾಯ್‌ನಿಂದ ಕಳುಹಿಸಲ್ಪಟ್ಟ ಕೋಚ್ ಆಗಿದ್ದರು. ನನ್ನ ವಿಭಾಗದಲ್ಲಿ ನಾನೇ ಶ್ರೇಷ್ಠನಾಗಿದ್ದೆ. 2017ರ ವಿಶ್ವ ಚಾಂಪಿಯನ್‌ಶೀಪ್‌ನಲ್ಲಿ ಇದನ್ನು ಸಾಬೀತುಪಡಿಸುವೆ. ಸಾಯ್ ಅಧಿಕಾರಿಗಳು ಹಾಗೂ ಕೋಚ್‌ಗಳ ಎಡವಟ್ಟಿನಿಂದಾಗಿ ನನ್ನ ಜೀವನ ನರಕವಾಗಿದೆ'' ಎಂದು ಆನಂದ್ ನೋವು ತೋಡಿಕೊಂಡಿದ್ದಾರೆ.
ಕೇಂದ್ರ ಕ್ರೀಡಾ ಸಚಿವಾಲಯ ಇಡೀ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಭಾರತಕ್ಕೆ ಪದಕ ಕೈತಪ್ಪಲು ಅಧಿಕಾರಿಗಳ ನಿರ್ಲಕ್ಷ ಕಾರಣ ಎಂಬ ಬಗ್ಗೆ ಸಂಶಯವಿದೆ. ಭಾರತಕ್ಕೆ ಜಾವೆಲಿನ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಸಿಗುವ ಸಾಧ್ಯತೆಯೂ ಇತ್ತು.