×
Ad

ಕೂದಲೆಳೆ ಅಂತರದಿಂದ ಕಂಚು ಕಳೆದುಕೊಂಡ ಅಮಿತ್ ಕುಮಾರ್

Update: 2016-09-16 23:50 IST

ಹೊಸದಿಲ್ಲಿ, ಸೆ.16: ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಕ್ಲಬ್ ಥ್ರೋ-ಎಫ್ 51 ವಿಭಾಗದಲ್ಲಿ ಭಾರತದ ಅಮಿತ್ ಕುಮಾರ್ ಕೂದಲೆಳೆ ಅಂತರದಿಂದ ಕಂಚಿನ ಪದಕದಿಂದ ವಂಚಿತರಾದರು.

ಶುಕ್ರವಾರ ಇಲ್ಲಿ ನಡೆದ ಸ್ಪರ್ಧೆಯ ಹೆಚ್ಚಿನ ಅವಧಿಯಲ್ಲಿ ಅಗ್ರ-3ರಲ್ಲಿ ಸ್ಥಾನ ಪಡೆದಿದ್ದ ಅಮಿತ್ ಅಂತಿಮವಾಗಿ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಸ್ಪರ್ಧೆಯಲ್ಲಿ ಕೊನೆಯ ಎಸೆತಗಾರ ಸ್ಲೋವಾಕಿಯದ ಮರಿಯನ್ ಕುರೆಜಾ ತನ್ನ 5ನೆ ಪ್ರಯತ್ನದಲ್ಲಿ 26.82 ಮೀ.ದೂರ ಎಸೆಯುವುದರೊಂದಿಗೆ ಅಮಿತ್‌ರನ್ನು 0.09 ಮೀ. ಅಂತರದಿಂದ ಮಣಿಸಿ ಕಂಚಿನ ಪದಕ ಜಯಿಸಿದರು.

ಅಮಿತ್ ಎಲ್ಲ ಆರು ಪ್ರಯತ್ನಗಳಲ್ಲಿ 25 ಮೀ.ಗೂ ಅಧಿಕ ದೂರ ಎಸೆದಿದ್ದರು. 2ನೆ ಪ್ರಯತ್ನದಲ್ಲಿ ಉತ್ತಮ ಸಾಧನೆ ಮಾಡಿದ್ದರು.

ಸರ್ಬಿಯದ ಝೆಲ್ಜ್‌ಕೊ ಡಿಮಿಟ್ರಿಜೆವಿಕ್ ಹಾಗೂ ಮಿಲಾಸ್ ಮಿಟಿಕ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದಾರೆ. 29.91 ಮೀ. ದೂರ ಎಸೆದ ಡಿಮಿಟ್ರಿಜೆವಿಕ್ ತನ್ನದೇ ವಿಶ್ವದಾಖಲೆಯನ್ನು ಮುರಿದರು. ಸಹ ಸ್ಪರ್ಧಿ ಮಿಟಿಕ್‌ರನ್ನು(26.84ಮೀ.) ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

ಪುರುಷರ ಕ್ಲಬ್ ಥ್ರೋ-ಎಫ್ 51 ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇನ್ನೋರ್ವ ಅಥ್ಲೀಟ್ ಧರ್ಮವೀರ್ 21.39 ಮೀ.ದೂರ ಎಸೆದು 9ನೆ ಸ್ಥಾನ ಪಡೆದರು.

ಸೆ.9 ರಂದು ಪುರುಷರ ಹೈಜಂಪ್‌ನಲ್ಲಿ ಮಾರಿಯಪ್ಪನ್ ತಂಗವೇಲು ಹಾಗೂ ವರುಣ್ ಸಿಂಗ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸುವುದರೊಂದಿಗೆ ಭಾರತ ಪದಕದ ಖಾತೆ ತೆರೆದಿತ್ತು. 3 ದಿನಗಳ ಬಳಿಕ ದೀಪಾ ಮಲಿಕ್ ಮಹಿಳೆಯರ ಶಾಟ್‌ಪುಟ್‌ನಲ್ಲಿ ಬೆಳ್ಳಿ ಜಯಿಸಿದರು. ಜಾವೆಲಿನ್ ಎಸೆತ-ಎಫ್ 46ರ ಸ್ಪರ್ಧೆಯಲ್ಲಿ ತನ್ನದೇ ವಿಶ್ವ ದಾಖಲೆ ಮುರಿದ ದೇವೇಂದ್ರ ಜಜಾರಿಯಾ ರಿಯೋ ಗೇಮ್ಸ್‌ನಲ್ಲಿ ಭಾರತಕ್ಕೆ 2ನೆ ಚಿನ್ನ ಗೆದ್ದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News