ಡೇವಿಸ್ ಕಪ್: ಭಾರತ ವಿರುದ್ಧ ಸ್ಪೇನ್ ಜಯಭೇರಿ

Update: 2016-09-17 17:58 GMT

ಹೊಸದಿಲ್ಲಿ, ಸೆ.17: ಆತಿಥೇಯ ಭಾರತದ ವಿರುದ್ಧದ ಪುರುಷರ ಡಬಲ್ಸ್ ಪಂದ್ಯವನ್ನ್ನು ಜಯಿಸಿದ 5 ಬಾರಿಯ ಚಾಂಪಿಯನ್ ಸ್ಪೇನ್ ತಂಡ ಇನ್ನೂ 2 ರಿವರ್ಸ್ ಸಿಂಗಲ್ಸ್ ಪಂದ್ಯ ಬಾಕಿ ಇರುವಾಗಲೇ ಡೇವಿಸ್‌ಕಪ್‌ನ ವಿಶ್ವ ಗ್ರೂಪ್ ಪ್ಲೇ-ಆಫ್ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿದೆ.

ಶನಿವಾರ ಇಲ್ಲಿ ನಡೆದ ಪುರುಷರ ಡಬಲ್ಸ್‌ನಲ್ಲಿ ಸ್ಪೇನ್ ತಂಡದ ಪರ ಆಡಿದ ಸ್ಟಾರ್ ಆಟಗಾರ ರಫೆಲ್ ನಡಾಲ್ ಹಾಗೂ ಮಾರ್ಕ್ ಲೊಪೆಝ್ ಭಾರತದ ಸ್ಟಾರ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ಸಾಕೇತ್ ಮೈನೇನಿ ವಿರುದ್ಧ 4-6, 7-6(2), 6-4, 6-4 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ಇತ್ತೀಚೆಗಷ್ಟೇ ರಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ರಫೆಲ್ ನಡಾಲ್-ಲೊಪೆಝ್ ಜೋಡಿ ಸ್ಪೇನ್ ತಂಡ ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯ ಜಯಿಸಲು ನೆರವಾಯಿತು.

 ಇಲ್ಲಿನ ಆರ್‌ಕೆ ಖನ್ನಾ ಟೆನಿಸ್ ಸ್ಟೇಡಿಯಂನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಗಾಯದ ಸಮಸ್ಯೆಯ ಕಾರಣದಿಂದಾಗಿ ಶುಕ್ರವಾರ ನಡೆದ ಸಿಂಗಲ್ಸ್ ಪಂದ್ಯದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.

ಭಾರತ ತಂಡ ಸ್ಪೇನ್ ವಿರುದ್ಧ ಉತ್ತಮ ಆರಂಭ ಪಡೆದಿತ್ತು. ಪೇಸ್-ಮೈನೇನಿ ಜೋಡಿ ಮೊದಲ ಸೆಟ್‌ನ್ನು 6-4 ಅಂತರದಿಂದ ಗೆದ್ದುಕೊಂಡು ಶುಭಾರಂಭ ಮಾಡಿತು. ಆದರೆ, 2ನೆ ಸೆಟ್‌ನ್ನು ಟ್ರೈ-ಬ್ರೇಕ್ ನಲ್ಲಿ ಗೆದ್ದುಕೊಂಡ ಸ್ಫೇನ್ ಅಂತಿಮ ಎರಡು ಸೆಟ್‌ಗಳನ್ನು ಸುಲಭವಾಗಿ ವಶಪಡಿಸಿಕೊಂಡಿತು.

  ಮೊದಲ ದಿನವಾದ ಶುಕ್ರವಾರ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಸೋತಿದ್ದ ಭಾರತ 0-2 ಹಿನ್ನಡೆ ಅನುಭವಿಸಿತ್ತು. ರಾಮ್‌ಕುಮಾರ್ ರಾಮನಾಥನ್ ಹಾಗೂ ಸಾಕೇತ್ ಮೈನೇನಿ ಕ್ರಮವಾಗಿ ಫೆಲಿಸಿಯಾನೊ ಲೊಪೆಝ್ ಹಾಗೂ ಡೇವಿಡ್ ಫೆರರ್ ವಿರುದ್ಧ ಶರಣಾಗಿದ್ದರು. ಸ್ಪೇನ್ ಮೊದಲ ದಿನವೇ 2-0 ಮುನ್ನಡೆ ಸಾಧಿಸಿತ್ತು.

ನಡಾಲ್‌ಗೆ ಈಗಲೂ ಗಾಯದ ಸಮಸ್ಯೆಯಿದೆ: ಲೊಪೆಝ್

ಹೊಸದಿಲ್ಲಿ, ಸೆ.16: ‘‘ರಫೆಲ್ ನಡಾಲ್ ಇನ್ನೂ ಮಣಿಕಟ್ಟಿನ ನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿಯೇ ಅವರು ಶುಕ್ರವಾರ ಡೇವಿಸ್‌ಕಪ್‌ನ ಮೊದಲ ಸಿಂಗಲ್ಸ್ ಪಂದ್ಯದಿಂದ ಕೊನೆಯ ಕ್ಷಣದಲ್ಲಿ ಹೊರಗುಳಿದಿದ್ದರು’’ ಎಂದು ನಡಾಲ್‌ರ ಸಹ ಆಟಗಾರ ಫೆಲಿಸಿಯಾನೊ ಲೊಪೆಝ್ ಬಹಿರಂಗಪಡಿಸಿದ್ದಾರೆ.

ಸ್ಪೇನ್‌ನ ನಡಾಲ್ ಡೇವಿಸ್‌ಕಪ್‌ನ ವರ್ಲ್ಡ್ ಗ್ರೂಪ್‌ಪ್ಲೇ-ಆಫ್‌ನ ಮೊದಲ ಸಿಂಗಲ್ಸ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್‌ರನ್ನು ಎದುರಿಸಬೇಕಾಗಿತ್ತು. ಆದರೆ, ಅವರು ಹೊಟ್ಟೆನೋವಿನಿಂದಾಗಿ ಪಂದ್ಯದಿಂದ ಹೊರಗುಳಿದಿದ್ದರು ಎಂದು ವರದಿಯಾಗಿತ್ತು. ಆದರೆ, ಇದೀಗ ಅವರು ಪಂದ್ಯದಿಂದ ಹೊರಗುಳಿಯಲು ಅನಾರೋಗ್ಯ ಕಾರಣವಲ್ಲ, ಫಿಟ್‌ನೆಸ್ ಸಮಸ್ಯೆ ಇದಕ್ಕೆ ಕಾರಣ ಎಂದು ಲೊಪೆಝ್ ಸ್ಪಷ್ಟಪಡಿಸಿದ್ದಾರೆ.

‘‘ರಫಾ(ನಡಾಲ್) ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಆಡುವ ಬಗ್ಗೆ ನೂರು ಪ್ರತಿಶತ ಖಚಿತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಒಂದು ವಾರದ ಹಿಂದೆಯೇ ನಡಾಲ್ ಬದಲಿಗೆ ಆಡಲು ಮಾನಸಿಕವಾಗಿ ಸಜ್ಜಾಗಿದ್ದೆ. ಕಳೆದ ರಾತ್ರಿ ನಾವು ಈ ಬಗ್ಗೆ ಮಾತನಾಡಿಕೊಂಡಿದ್ದೆವು. ಕೊನೆಯ ಕ್ಷಣದ ತನಕ ಅವರು ಪಂದ್ಯದಲ್ಲಿ ಆಡುವ ಬಗ್ಗೆ ಶೇ.100ರಷ್ಟು ಖಚಿತತೆಯಿರಲಿಲ್ಲ’’ ಎಂದು ಲೊಪೆಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News