ಕಿವೀಸ್ ವೇಗಿ ಸೌಥಿ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಕ್ಕೆ
ವೆಲ್ಲಿಂಗ್ಟನ್, ಸೆ.17: ನ್ಯೂಝಿಲೆಂಡ್‌ನ ವೇಗದ ಬೌಲರ್ ಟಿಮ್ ಸೌಥಿ ಪಾದದ ಪಾದದ ಕೀಲಿನ ನೋವಿನ ಕಾರಣದಿಂದಾಗಿ ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಸೌಥಿ ಬದಲಿಗೆ ಇನ್ನೋರ್ವ ವೇಗದ ಬೌಲರ್ ಮ್ಯಾಟ್ ಹೆನ್ರಿ ಆಯ್ಕೆಯಾಗಿದ್ದಾರೆ.
ಅಭ್ಯಾಸದ ವೇಳೆ ಬೌಲಿಂಗ್ ನಡೆಸುವಾಗ ಸೌಥಿಗೆ ಕಾಲು ನೋವು ಕಾಣಿಸಿಕೊಂಡಿದೆ. ಸ್ಕಾನಿಂಗ್‌ನ ವೇಳೆ ಸೌಥಿಯ ಎಡಗಾಲಿನ ಪಾದದ ಕೀಲಿನಲ್ಲಿ ಬಿರುಕು ಬಿಟ್ಟಿದ್ದು ಪತ್ತೆಯಾಗಿದೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ.
27ರ ಪ್ರಾಯದ ಟಿಮ್ ಸೌಥಿ ನ್ಯೂಝಿಲೆಂಡ್‌ನ ಅತ್ಯಂತ ಅನುಭವಿ ಆಟಗಾರನಾಗಿದ್ದು, 52 ಪಂದ್ಯಗಳಲ್ಲಿ ಒಟ್ಟು 177 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಸ್ವದೇಶಕ್ಕೆ ವಾಪಸಾಗಿರುವ ಸೌಥಿ ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಏಕದಿನ ಸರಣಿಗೆ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದೆ.
‘‘ಟಿಮ್ ಸೌಥಿ ಭಾರತ ಪ್ರವಾಸದ ತಯಾರಿಗಾಗಿ ಕಠಿಣ ಶ್ರಮಪಟ್ಟಿದ್ದು, ಆದರೆ, ದುರದೃಷ್ಟವಶಾತ್ ಅವರು ಎಲ್ಲ ಮೂರು ಟೆಸ್ಟ್ ಪಂದ್ಯಗಳಿಂದಲೂ ಹೊರಗುಳಿದಿದ್ದಾರೆ. ಸೌಥಿಗೆ ಗಾಯದಿಂದ ಚೇತರಿಸಿಕೊಳ್ಳಲು 7 ರಿಂದ 10 ದಿನಗಳ ವಿಶ್ರಾಂತಿಯ ಅಗತ್ಯವಿದೆ. ಸೌಥಿ ಬದಲಿಗೆ ಮ್ಯಾಟ್ ಹೆನ್ರಿ ತಂಡವನ್ನು ಸೇರಲು ಸಜ್ಜಾಗಿದ್ದಾರೆ. ಅವರು ಮೊದಲ ಟೆಸ್ಟ್ ಆರಂಭಕ್ಕೆ ಮೊದಲು ತಂಡವನ್ನು ಸೇರಿಕೊಳ್ಳಲಿದ್ದಾರೆ’’ ಎಂದು ನ್ಯೂಝಿಲೆಂಡ್ ಕೋಚ್ ಮೈಕ್ ಹೆನ್ಸನ್ ಹೇಳಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿರುವ 24ರ ಪ್ರಾಯದ ಹೆನ್ರಿ ಈ ತನಕ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಫೆಬ್ರವರಿಯಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.
ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಟೆಸ್ಟ್ ಸರಣಿ ಸೆ.22 ರಿಂದ ಕಾನ್ಪುರದಲ್ಲಿ ಆರಂಭವಾಗಲಿದೆ. ಕೋಲ್ಕತಾ ಹಾಗೂ ಇಂದೋರ್‌ನಲ್ಲಿ ಉಳಿದ ಪಂದ್ಯಗಳು ನಡೆಯುತ್ತವೆ. ನ್ಯೂಝಿಲೆಂಡ್ ಮೊದಲ ಬಾರಿ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಲು ಎದುರು ನೋಡುತ್ತಿದೆ.