×
Ad

ನ್ಯೂಝಿಲೆಂಡ್ ವಿರುದ್ಧ ಮುಂಬೈಗೆ ಮುನ್ನಡೆ

Update: 2016-09-17 23:43 IST

ಹೊಸದಿಲ್ಲಿ, ಸೆ.17: ಆರಂಭಿಕ ದಾಂಡಿಗ ಕೌಸ್ತುಭ್ ಪವಾರ್(100) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್(103) ಆಕರ್ಷಕ ಶತಕದ ಸಹಾಯದಿಂದ ಮುಂಬೈ ತಂಡ ನ್ಯೂಝಿಲೆಂಡ್ ವಿರುದ್ಧ 107 ರನ್ ಮುನ್ನಡೆಯಲ್ಲಿದೆ.

ತ್ರಿದಿನ ಅಭ್ಯಾಸ ಪಂದ್ಯದ ಮೊದಲ ದಿನವಾದ ಶುಕ್ರವಾರ ನ್ಯೂಝಿಲೆಂಡ್ 7 ವಿಕೆಟ್‌ಗಳ ನಷ್ಟಕ್ಕೆ 324 ರನ್ ಇನಿಂಗ್ಸ್ ಮಾಡಿಕೊಂಡಿತ್ತು. ಶನಿವಾರ ನ್ಯೂಝಿಲೆಂಡ್ ಇನಿಂಗ್ಸ್‌ಗೆ ತಕ್ಕ ಉತ್ತರ ನೀಡಿರುವ ಮುಂಬೈ ತಂಡ 2ನೆ ದಿನದಾಟದಂತ್ಯಕ್ಕೆ 103 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 431 ರನ್ ಗಳಿಸಿದೆ.

ಅಸ್ಥಿರ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಮುಂದಿನ ವಾರ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಮುಂಬೈ ನಾಯಕ ರೋಹಿತ್ ಶರ್ಮ 18 ರನ್ ಗಳಿಸಲಷ್ಟೇ ಶಕ್ತರಾದರು.

ಜೂನಿಯರ್ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಪ್ರಸಿದ್ದಿಯಾಗಿರುವ ಅರ್ಮಾನ್ ಜಾಫರ್ ಕಿವೀಸ್‌ನ ವೇಗಿಗಳಾದ ಬೌಲ್ಟ್ ಹಾಗೂ ವಾಗ್ನರ್ ದಾಳಿಯನ್ನು ಸಮರ್ಥವಾಗಿ ಎದುರಿಸಿ 123 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 69 ರನ್ ಗಳಿಸಿ ಗಮನ ಸೆಳೆದರು.

 ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆದಿತ್ಯ ತಾರೆ(ಔಟಾಗದೆ 53) ಹಾಗೂ ಸಿದ್ದೇಶ್ ಲಾಡ್(ಔಟಾಗದೆ 86 ರನ್) ಆರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 137 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಮುಂಬೈ ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೆ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿದ ಪವಾರ್(100 ರನ್, 228 ಎಸೆತ, 15 ಬೌಂಡರಿ, 1 ಸಿಕ್ಸರ್) ಹಾಗೂ ಎಸ್‌ಎ ಯಾದವ್(103 ರನ್, 86 ಎಸೆತ, 9 ಬೌಂಡರಿ, 8 ಸಿಕ್ಸರ್) ತಂಡಕ್ಕೆ ಉತ್ತಮ ಆರಂಭ ನೀಡಿದರು.

ಪವಾರ್ ಹಾಗೂ ಯಾದವ್ 4ನೆ ವಿಕೆಟ್‌ಗೆ 155 ರನ್ ಸೇರಿಸುವುದರೊಂದಿಗೆ ತಂಡದ ಮೊತ್ತವನ್ನು 288 ರನ್‌ಗೆ ತಲುಪಿಸಿದರು. ದಿನದಾಟದಂತ್ಯಕ್ಕೆ ತಾರೆ ಹಾಗೂ ಲಾಡ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

 ನ್ಯೂಝಿಲೆಂಡ್‌ನ ಪರ ಸ್ಪಿನ್ನರ್ ಐಶ್ ಸೋಧಿ(2-132) ಯಶಸ್ವಿ ಬೌಲರ್ ಎನಿಸಿಕೊಂಡರು

ಸಂಕ್ಷಿಪ್ತ ಸ್ಕೋರ್

ನ್ಯೂಝಿಲೆಂಡ್: 75 ಓವರ್‌ಗಳಲ್ಲಿ 324/7 ಡಿಕ್ಲೇರ್

(ವಿಲಿಯಮ್ಸನ್ 50,ಲಾಥಮ್ 55, ಟೇಲರ್ 41, ಸಂಧು 2-21)

ಮುಂಬೈ: 103 ಓವರ್‌ಗಳಲ್ಲಿ 431/5

(ಕೆಆರ್ ಪವಾರ್ 100, ಯಾದವ್ 103, ಸಿದ್ದೇಶ್ ಲಾಡ್ ಔಟಾಗದೆ 86, ಆದಿತ್ಯ ತಾರೆ ಔಟಾಗದೆ 53, ಐಶ್ ಸೋಧಿ 2-132)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News