ಶ್ರೀಲಂಕಾದ ದಿನೇಶ್ ಚಾಂಡಿಮಲ್‌ಗೆ ಸರ್ಜರಿ

Update: 2016-09-19 17:55 GMT

ಕೊಲಂಬೊ, ಸೆ.19: ಕಳೆದ ವಾರ ದೇಶೀಯ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಶ್ರೀಲಂಕಾದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

 ಮರ್ಕಟೈಲ್ ಟೂರ್ನಿಯ ಪಂದ್ಯದ ವೇಳೆ ಚೆಂಡೊಂದು ಬಲಗೈ ಹೆಬ್ಬೆರಳಿಗೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಚಾಂಡಿಮಲ್‌ಗೆ ಗಂಭೀರ ಗಾಯವಾಗಿತ್ತು. ಚಾಂಡಿಮಲ್‌ಗೆ ಗಾಯದಿಂದ ಚೇತರಿಸಿಕೊಳ್ಳಲು ಮೂರು ವಾರ ವಿಶ್ರಾಂತಿಯ ಅಗತ್ಯವಿದೆ. ಮುಂಬರುವ ಝಿಂಬಾಬ್ವೆ ಪ್ರವಾಸದ ವೇಳೆ ಚಾಂಡಿಮಲ್ ಫಿಟ್ ಆಗಲಿದ್ದಾರೆಂದು ಟೀಮ್ ಮ್ಯಾನೇಜ್‌ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.

ಝಿಂಬಾಬ್ವೆ ಪ್ರವಾಸದ ವೇಳಾಪಟ್ಟಿ ಇನ್ನಷ್ಟೇ ಅಂತಿಮವಾಗಬೇಕಾಗಿದೆ. ಆದರೆ, ಮೊದಲ ಟೆಸ್ಟ್ ಅ.29 ರಿಂದ ಆರಂಭವಾಗುವ ಸಾಧ್ಯತೆಯಿದೆ.

ಶ್ರೀಲಂಕಾದ ಉಪ ನಾಯಕ ದಿನೇಶ್ ಚಾಂಡಿಮಲ್ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 36 ಪಂದ್ಯಗಳಲ್ಲಿ ಒಟ್ಟು 1451 ರನ್ ಗಳಿಸಿದ್ದರು. ಆಸ್ಟ್ರೇಲಿಯ ವಿರುದ್ಧದ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಗಾಯಗೊಂಡಿದ್ದ ಆ್ಯಂಜೆಲೊ ಮ್ಯಾಥ್ಯೂಸ್ ಬದಲಿಗೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.

ಈವರ್ಷದ ಜೂನ್‌ನಿಂದ ಆಗಸ್ಟ್‌ನ ತನಕ ಏಕದಿನದಲ್ಲಿ ಸತತ ಐದು ಅರ್ಧಶತಕ ಬಾರಿಸಿದ್ದರು. ಆಸ್ಟ್ರೇಲಿಯ ವಿರುದ್ಧ 2ನೆ ಏಕದಿನದಲ್ಲಿ 48 ರನ್‌ಗೆ ಔಟಾಗಿದ್ದ ಚಾಂಡಿಮಲ್ ಸತತ 6 ಅರ್ಧಶತಕ ಬಾರಿಸಿದ ಶ್ರೀಲಂಕಾದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಅವಕಾಶದಿಂದ ವಂಚಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News