ಮತ್ಸರಿಗಳಿಂದ ನನ್ನ ಘನತೆಗೆ ಧಕ್ಕೆ ತರಲು ಯತ್ನ :ಪೇಸ್

Update: 2016-09-19 18:03 GMT

ಹೊಸದಿಲ್ಲಿ, ಸೆ.19: ‘‘ಕೆಲವು ಮತ್ಸರಿಗಳು ನನ್ನ ಘನತೆಗೆ ಚ್ಯುತಿ ತರಲು ಬಯಸುತ್ತಿದ್ದಾರೆ’’ಎಂದು ಯಾರ ಹೆಸರನ್ನು ಹೇಳದೇ ಭಾರತದ ಹಿರಿಯ ಟೆನಿಸ್ ಪಟು ಲಿಯಾಂಡರ್ ಪೇಸ್ ಆರೋಪಿಸಿದ್ದಾರೆ.

 ‘‘ನಾನು ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಅಥವಾ ಡೇವಿಸ್ ಕಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸುವ ಸಂದರ್ಭ ವಿವಾದಗಳು ಉದ್ಭವಿಸುತ್ತವೆ. ನಾನು ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಬರೆಯುವ ನಿಟ್ಟಿನಲ್ಲಿ ನಿರತನಾಗಿರುವ ಕಾರಣ ನಾನು ಜನರು ಏನು ಹೇಳುತ್ತಿದ್ದಾರೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’’ ಎಂದು ಪೇಸ್ ತಿಳಿಸಿದ್ದಾರೆ.

‘‘ನನ್ನ ವೃತ್ತಿಜೀವನದಲ್ಲಿ ನನ್ನ ಸ್ಪರ್ಧಿಗಳು ತುಂಬಾ ಅಸೂಯೆ ಹೊಂದಿದ್ದರು. 18 ಗ್ರಾನ್‌ಸ್ಲಾಮ್ ಪ್ರಶಸ್ತಿ ಹಾಗು ಏಳು ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲು ಎಷ್ಟು ಶ್ರಮ ಅಡಗಿದೆ ಎಂದು ಅವರಿಗೆ ಗೊತ್ತಿಲ್ಲ. ಕೆಲವು ಸ್ಪರ್ಧಿಗಳು 10 ಜನ್ಮ ಎತ್ತಿಬಂದರೂ ಈ ಸಾಧನೆ ಮಾಡಲು ಅವರಿಂದ ಸಾಧ್ಯವೇ ಇಲ್ಲ. ಕಠಿಣ ಶ್ರಮಪಡುವ ಬದಲು ನನ್ನನ್ನು ತುಳಿಯಲು ನೋಡುತ್ತಾರೆ’’ ಎಂದು ಸಂದರ್ಶನವೊಂದರಲ್ಲಿ ಪೇಸ್ ತಿಳಿಸಿದ್ದಾರೆ.

  ‘‘ದುರುದ್ದೇಶಪೂರಿತ ಕೆಲಸದಿಂದ ನನ್ನ ಘನತೆಗೆ ಧಕ್ಕೆ ತರಲು ಕೆಲವರು ಬಯಸುತ್ತಿದ್ದಾರೆ. ಈ ಮೂಲಕ ಜನರ ಕಣ್ಣಲ್ಲಿ ಲಿಯಾಂಡರ್ ಪೇಸ್ ಕೆಟ್ಟವನು ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ಘನತೆ-ಗೌರವ ಪಡೆಯಲು ಇಡೀ ಜೀವನ ಮುಡಿಪಾಗಿಡಬೇಕಾಗುತ್ತದೆ. ಆದರೆ, ಅದನ್ನು ಹಾಳುಗೆಡಲು ಒಂದು ಸೆಕೆಂಡ್ ಸಾಕು’’ ಎಂದು ಪೇಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News