ಕಶ್ಯಪ್ ಪ್ರಧಾನ ಸುತ್ತಿಗೆ ಲಗ್ಗೆ

Update: 2016-09-20 18:28 GMT

 ಟೋಕಿಯೊ, ಸೆ.20: ಜಪಾನ್ ಓಪನ್ ಸೂಪರ್ ಸರಣಿಯ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಮಂಗಳವಾರ ನಡೆದ ಅರ್ಹತಾ ಸುತ್ತಿನ ಎರಡು ಸಿಂಗಲ್ಸ್ ಪಂದ್ಯಗಳನ್ನು ಜಯಿಸಿರುವ ಕಶ್ಯಪ್ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದುಕೊಂಡರು.

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಆಸ್ಟ್ರೀಯದ ಡೇವಿಡ್ ಒಬರ್‌ನೊಸ್ಟರರ್ 3-11 ಸೆಟ್‌ಗಳ ಹಿನ್ನಡೆಯಲ್ಲಿದ್ದಾಗ ಗಾಯಾಳು ನಿವೃತ್ತಿಯಾದರು. ಈ ಹಿನ್ನೆಲೆಯಲ್ಲಿ ಕಶ್ಯಪ್ ವಿಜಯಿ ಎಂದು ಘೋಷಿಸಲಾಯಿತು.

ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ಆ್ಯಂಡ್ರಿಯಸ್ ಆ್ಯಂಟನ್‌ಸೆನ್‌ರನ್ನು 21-18, 21-12 ಸೆಟ್‌ಗಳ ಅಂತರದಿಂದ ಮಣಿಸಿದ ಕಶ್ಯಪ್ ಪ್ರಧಾನ ಸುತ್ತಿಗೆ ತಲುಪಿದರು. ಕಶ್ಯಪ್ ಮುಂದಿನ ಸುತ್ತಿನಲ್ಲಿ ತನ್ನದೇ ದೇಶದ ಕೆ.ಶ್ರೀಕಾಂತ್ ಸವಾಲು ಎದುರಿಸಲಿದ್ದಾರೆ.

ಇದೇ ವೇಳೆ, ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ತನ್ವಿ ಲಾಡ್ ಜಪಾನ್‌ನ ಚಿಸಾಟೊ ಹೊಶಿ ವಿರುದ್ಧ ಪ್ರಬಲ ಹೋರಾಟ ನೀಡಿದರೂ 21-18, 21-12 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಟೋಕಿಯೊ ಮೆಟ್ರೊಪಾಲಿಟನ್ ಜಿಮ್ನಾಸಿಯಂನಲ್ಲಿ ಬುಧವಾರ ಆರಂಭವಾಗಲಿರುವ ಪ್ರಮುಖ ಡ್ರಾ ಪಂದ್ಯದಲ್ಲಿ ಶ್ರೀಕಾಂತ್‌ರಲ್ಲದೆ, ಎಚ್‌ಎಸ್ ಪ್ರಣಯ್, ಅಜಯ್ ಜಯರಾಮ್, ಬಿ.ಸಾಯಿ ಪ್ರಣೀತ್ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News