×
Ad

ಟೀಮ್‌ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಎಂಎಸ್‌ಕೆ ಪ್ರಸಾದ್ ಆಯ್ಕೆ

Update: 2016-09-21 14:07 IST

ಮುಂಬೈ, ಸೆ.21: ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಎಸ್‌ಕೆ ಪ್ರಸಾದ್ ಬುಧವಾರ ಆಯ್ಕೆಯಾಗಿದ್ದಾರೆ.

ಇಲ್ಲಿ ನಡೆದ ಬಿಸಿಸಿಐನ 87ನೆ ವಾರ್ಷಿಕ ಮಹಾಸಭೆ(ಎಜಿಎಂ)ಯಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿರುವ ಪ್ರಸಾದ್‌ರನ್ನು ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

   ಸಂದೀಪ್ ಪಾಟೀಲ್‌ರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿರುವ 41ರ ಪ್ರಾಯದ ಆಂಧ್ರ ಪ್ರದೇಶದ ಪ್ರಸಾದ್ ಐವರು ಸದಸ್ಯರನ್ನು ಒಳಗೊಂಡ ಹಿರಿಯರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಮಿತಿಯಲ್ಲಿರುವ ಇತರ ಆಯ್ಕೆಗಾರರೆಂದರೆ: ದೇವಂಗ್ ಗಾಂಧಿ (ಪೂರ್ವ ವಲಯ), ಜತಿನ್ ಪರಾಂಜಪೆ(ಪಶ್ಚಿಮ ವಲಯ), ಸಂದೀಪ್ ಸಿಂಗ್ (ಉತ್ತರ ವಲಯ) ಹಾಗೂ ಗಗನ್ ಖೋಡಾ(ಕೇಂದ್ರ ವಲಯ) ಅವರಿದ್ದಾರೆ.

 ಇದೇ ವೇಳೆ, ಅಜಯ್ ಶಿರ್ಕೆ ಅವರನ್ನು ಬಿಸಿಸಿಐನ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಯಿತು. ಅನುರಾಗ್ ಠಾಕೂರ್ ಅವರು ಶಶಾಂಕ್ ಮನೋಹರ್ ರಾಜೀನಾಮೆಯಿಂದ ತೆರವಾದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಬಳಿಕ ಜೂನ್‌ನಲ್ಲಿ ಶಿರ್ಕೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.

ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿರುವ ಪ್ರಸಾದ್ ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿದ್ದು, 6 ಟೆಸ್ಟ್, 17 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 106 ರನ್ ಹಾಗೂ ಏಕದಿನದಲ್ಲಿ 131 ರನ್ ಗಳಿಸಿದ್ದಾರೆ. ಸಂದೀಪ್ ಪಾಟೀಲ್ ಅವರ 4 ವರ್ಷಗಳ ಅಧಿಕಾರದ ಅವಧಿ ಸೆಪ್ಟಂಬರ್‌ಗೆ ಅಂತ್ಯಗೊಂಡ ಕಾರಣ ಬಿಸಿಸಿಐ ಇತ್ತೀಚೆಗೆ ಜಾಹೀರಾತು ಮೂಲಕ ಆಯ್ಕೆಗಾರರಿಗೆ ಅರ್ಜಿ ಆಹ್ವಾನಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News