×
Ad

ಪಾಕಿಸ್ತಾನಕ್ಕೆ ಟೆಸ್ಟ್ ಚಾಂಪಿಯನ್‌ಶಿಪ್ ರಾಜದಂಡ ಪ್ರದಾನ

Update: 2016-09-21 23:53 IST

ಲಾಹೋರ್, ಸೆ.21: ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದ ಕಾರಣ ಮೊತ್ತ ಮೊದಲ ಬಾರಿ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾವುಲ್ ಹಕ್‌ಗೆ ಪ್ರತಿಷ್ಠಿತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಮಾಸ್(ಗದೆ) ನೀಡಿ ಐಸಿಸಿ ಗೌರವಿಸಿದೆ.

‘‘ನಾಯಕನಾಗಿ ಐಸಿಸಿ ಟ್ರೋಫಿ ಎತ್ತಿಹಿಡಿಯಬೇಕೆನ್ನುವುದು ನನ್ನ ಬಹುದಿನ ಕನಸಾಗಿತ್ತು. ಸಾಂಪ್ರದಾಯಿಕ ಮಾದರಿಯ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 9ನೆ ಅಂತಾರಾಷ್ಟ್ರೀಯ ನಾಯಕ ಎನಿಸಿಕೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನಿಗೂ ಈ ಪ್ರಶಸ್ತಿಯನ್ನು ಸಮರ್ಪಿಸುವೆನು’’ ಎಂದು ಮಿಸ್ಬಾವುಲ್ ಹಕ್ ಪ್ರತಿಕ್ರಿಯಿಸಿದ್ದಾರೆ.

ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ಲಾಹೋರ್‌ನ ಗಡ್ಡಾಫಿ ಸ್ಟೇಡಿಯನಲ್ಲಿ ಐಸಿಸಿ ಚಾಂಪಿಯನ್‌ಶಿಪ್ ರಾಜದಂಡವನ್ನು ಮಿಸ್ಬಾವುಲ್ ಹಕ್‌ಗೆ ಹಸ್ತಾಂತರಿಸಿದರು.

ಪಾಕಿಸ್ತಾನ ಮುಂದಿನ ತಿಂಗಳು ದುಬೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದ್ದು, ಆ ನಂತರ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯದ ವಿರುದ್ಧವೂ ಟೆಸ್ಟ್ ಪಂದ್ಯ ಆಡಲಿದೆ. ಸ್ಥಿರ ಪ್ರದರ್ಶನ ನೀಡಿ ನಂ.1 ಸ್ಥಾನ ಕಾಯ್ದುಕೊಳ್ಳುವುದು ಮಿಸ್ಬಾವುಲ್‌ಹಕ್‌ರ ಗುರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News