×
Ad

ಇಂದು ಕಾನ್ಪುರದಲ್ಲಿ ಭಾರತದ ಐತಿಹಾಸಿಕ 500ನೆ ಟೆಸ್ಟ್ ಆರಂಭ

Update: 2016-09-21 23:58 IST

 ಕಾನ್ಪುರ, ಸೆ.21: ತವರು ನೆಲದಲ್ಲಿ ಐತಿಹಾಸಿಕ 500ನೆ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿರುವ ಬಲಿಷ್ಠ ಭಾರತೀಯ ಕ್ರಿಕೆಟ್ ತಂಡ ಗುರುವಾರ ಇಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ನ್ಯೂಝಿಲೆಂಡ್‌ನ್ನು ಎದುರಿಸಲಿದೆ. ಭಾರತ ತಂಡ ಕಿವೀಸ್ ವಿರುದ್ಧ ಟೆಸ್ಟ್ ಆಡುವ ಮೂಲಕ ಸ್ವದೇಶದಲ್ಲಿ ಈ ಋತುವಿನಲ್ಲಿ ಆಡಲಿರುವ 13 ಟೆಸ್ಟ್ ಪಂದ್ಯಗಳಿಗೆ ನಾಂದಿ ಹಾಡಲಿದೆ.

 80 ವರ್ಷಗಳ ಹಿಂದೆ ಟೆಸ್ಟ್ ಆಡಲು ಆರಂಭಿಸಿರುವ ಟೀಮ್ ಇಂಡಿಯಾಕ್ಕೆ ಗುರುವಾರ ಇಲ್ಲಿ ನಡೆಯಲಿರುವ ಪಂದ್ಯ 500ನೆ ಟೆಸ್ಟ್ ಪಂದ್ಯವಾಗಿದೆ. ಭಾರತ 1932ರಲ್ಲಿ ಬ್ರಿಟಿಷ್ ವಸಾಹತು ಕಾಲದಲ್ಲಿ ಚೊಚ್ಚಲ ಟೆಸ್ಟ್ ಆಡಿತ್ತು. ಆ ಬಳಿಕ ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ.

ಸ್ವದೇಶದಲ್ಲಿ ಅದರಲ್ಲೂ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಭಾರತ ಯಾವಾಗಲೂ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

ಪಂದ್ಯಕ್ಕೆ ಮಳೆ ಭೀತಿ: ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮುಂದಿನ ಆರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಾನ್ಪುರದ ಗ್ರೀನ್‌ಪಾರ್ಕ್ ಪಿಚ್ ಸಾಂಪ್ರದಾಯಿಕ ಭಾರತ ಪಿಚ್ ಆಗಿದ್ದು, ಇಲ್ಲಿ ಯಾವಾಗಲೂ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ತ್ರಿವಳಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜ ಹಾಗೂ ಅಮಿತ್ ಮಿಶ್ರಾರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಕಿವೀಸ್‌ಗೆ ಸರಣಿ ಸಜ್ಜಾಗಲು ಸರಿಯಾದ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ದಿಲ್ಲಿಯ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಏಕೈಕ ಅಭ್ಯಾಸ ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ ಕಿವೀಸ್ ಬೌಲರ್‌ಗಳು ದುಬಾರಿಯಾಗಿದ್ದರು. ಮುಂಬೈನ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿ ಪ್ರಾಬಲ್ಯ ಮೆರೆದಿದ್ದರು.

ಭಾರತದಲ್ಲಿ ಕಿವೀಸ್ ಕಳಪೆ ದಾಖಲೆ: ಪ್ರವಾಸಿ ಕಿವೀಸ್ ತಂಡ ಭಾರತದ ನೆಲದಲ್ಲಿ ಈ ತನಕ ಉತ್ತಮ ಪ್ರದರ್ಶನ ನೀಡಿಲ್ಲ. ಕಳೆದ 14 ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸಿಲ್ಲ. 1998ರಲ್ಲಿ ಕೊನೆಯ ಬಾರಿ ಭಾರತ ವಿರುದ್ಧ ಗೆಲುವು ಸಾಧಿಸಿತ್ತು. ಕಿವೀಸ್‌ನ 15 ಸದಸ್ಯರ ತಂಡದಲ್ಲಿ ಯುವ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್‌ಗೆ ಭಾರತದಲ್ಲಿ 5 ಟೆಸ್ಟ್ ಆಡಿರುವ ಅನುಭವವಿದೆ. ಉಳಿದವರು ಅನನುಭವಿಗಳು. ಭಾರತ ತಂಡ ಸ್ವದೇಶದಲ್ಲಿ ಆಡಿರುವ ಕಳೆದ 10 ಟೆಸ್ಟ್ ಪಂದ್ಯಗಳ ಪೈಕಿ 9ರಲ್ಲಿ ಜಯ ಸಾಧಿಸಿ ಪ್ರಾಬಲ್ಯ ಮೆರೆದಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಮಳೆಬಾಧಿತ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಡ್ರಾ ಸಾಧಿಸಿತ್ತು.

ಭಾರತಕ್ಕೆ ಆರಂಭಿಕ ಆಟಗಾರರ ಚಿಂತೆ: ಕೊಹ್ಲಿ ಪಡೆಗೆ ಸರಿಯಾದ ಆರಂಭಿಕ ಆಟಗಾರರನ್ನು ಕಣಕ್ಕಿಳಿಸುವುದು ತಲೆನೋವಾಗಿ ಪರಿಣಮಿಸಿದೆ. ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಅರ್ಧಶತಕ ಬಾರಿಸಲು ವಿಫಲವಾಗಿದ್ದ ಎಡಗೈ ದಾಂಡಿಗ ಶಿಖರ್ ಧವನ್ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್‌ರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ. ರಾಹುಲ್ ವಿಂಡೀಸ್ ಪ್ರವಾಸದಲ್ಲಿ ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದಾರೆ.

‘‘ಭಾರತೀಯ ತಂಡದಲ್ಲಿ ಸ್ಪರ್ಧೆ ಏರ್ಪಟ್ಟಿರುವುದು ಉತ್ತಮ ಬೆಳವಣಿಗೆ. ರಾಹುಲ್ ಅವರು ಮುರಳಿ ವಿಜಯ್‌ರೊಂದಿಗೆ ಇನಿಂಗ್ಸ್ ಆರಂಭಿಸಿದರೆ ಅಚ್ಚರಿ ಎನಿಸದು’’ ಎಂದು ಸ್ವತಃ ಧವನ್ ಹೇಳಿಕೊಂಡಿದ್ದಾರೆ. ಆದರೆ, ವಿಂಡೀಸ್ ಪ್ರವಾಸದಲ್ಲಿ ವಿಜಯ್ ಪ್ರದರ್ಶನವೂ ಗಮನಾರ್ಹವಾಗಿಲ್ಲ. ಚೇತೇಶ್ವರ ಪೂಜಾರ ಕೂಡ ವಿಂಡೀಸ್ ಪ್ರವಾಸದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರೂ ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ವಿರಾಟ್ ಕೊಹ್ಲಿ ಅವರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಲಿದ್ದಾರೆ.

ರೋಹಿತ್ ಶರ್ಮಗೆ ಅಗ್ನಿ ಪರೀಕ್ಷೆ: ಪ್ರಸ್ತುತ ಸರಣಿಯು ಮುಂಬೈ ದಾಂಡಿಗ ರೋಹಿತ್ ಶರ್ಮಗೆ ಅಗ್ನಿ ಪರೀಕ್ಷೆಯಾಗಿದೆ. ರೋಹಿತ್ ಈ ತನಕ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ. ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆಯಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ. ರಹಾನೆ ವಿಂಡೀಸ್ ಪ್ರವಾಸದಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದರು.

 ಸ್ಪಿನ್ನರ್‌ಗಳು ಈ ಸರಣಿಯಲ್ಲಿ ಪ್ರಮುಖ ಪಾತ್ರವಹಿಸಲು ಸಜ್ಜಾಗಿದ್ದಾರೆ. ಎಡಗೈ ಸ್ಪಿನ್ ಹಾಗೂ ಬ್ಯಾಟಿಂಗ್ ಸಾಮರ್ಥ್ಯಹೊಂದಿರುವ ಜಡೇಜ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ಅಶ್ವಿನ್‌ರೊಂದಿಗೆ 11ರ ಬಳಗ ಸೇರುವುದು ನಿಶ್ಚಿತ. ಇಶಾಂತ್ ಶರ್ಮ ಚಿಕೂನ್‌ಗುನ್ಯಾದಿಂದ ಬಳಲುತ್ತಿರುವ ಕಾರಣ ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್ ಹಾಗೂ ಉಮೇಶ್ ಯಾದವ್‌ರನ್ನೇ ಕೊಹ್ಲಿ ಹೆಚ್ಚು ನೆಚ್ಚಿಕೊಳ್ಳಬೇಕಾಗಿದೆ.

ಅಂಕಿ-ಅಂಶ: *ನ್ಯೂಝಿಲೆಂಡ್‌ನ ನೀಲ್ ವಾಗ್ನರ್‌ಗೆ ಟೆಸ್ಟ್‌ನಲ್ಲಿ 100 ವಿಕೆಟ್ ಪೂರೈಸಲು ಇನ್ನು ಆರು ವಿಕೆಟ್‌ಗಳ ಅಗತ್ಯವಿದೆ. ವಾಗ್ನರ್ 23 ಟೆಸ್ಟ್ ಆಡಿದ್ದಾರೆ. *ನ್ಯೂಝಿಲೆಂಡ್ ಏಷ್ಯಾಖಂಡದಲ್ಲಿ ಆಡಿರುವ ಕಳೆದ ಮೂರು ಸರಣಿಗಳನ್ನು ಡ್ರಾ ಮಾಡಿಕೊಂಡಿದೆ.

*ಆರ್.ಅಶ್ವಿನ್‌ಗೆ 200 ಟೆಸ್ಟ್ ವಿಕೆಟ್ ಪೂರೈಸಲು ಇನ್ನು 7 ವಿಕೆಟ್ ಅಗತ್ಯವಿದೆ.

18: ನ್ಯೂಝಿಲೆಂಡ್ ತಂಡ 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಅಶ್ವಿನ್ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 18 ವಿಕೆಟ್ ಉರುಳಿಸಿದ್ದರು. ಆ ಸರಣಿಯಲ್ಲಿ 4 ಇನಿಂಗ್ಸ್‌ಗಳಲ್ಲಿ ಮೂರು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಅಶ್ವಿನ್‌ಗೆ ಅತ್ಯಂತ ವೇಗವಾಗಿ 200 ವಿಕೆಟ್ ಪೂರೈಸಿದ 2ನೆ ಬೌಲರ್ ಎನಿಸಿಕೊಳ್ಳಲು 7 ವಿಕೆಟ್ ಅಗತ್ಯವಿದೆ.

85.20: ವಿರಾಟ್ ಕೊಹ್ಲಿ ನ್ಯೂಝಿಲೆಂಡ್ ವಿರುದ್ಧ 85.20 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಕಿವೀಸ್ ವಿರುದ್ಧ ಆಡಿರುವ 7 ಇನಿಂಗ್ಸ್‌ಗಳಲ್ಲಿ 2 ಶತಕ, 3 ಅರ್ಧಶತಕ ಬಾರಿಸಿದ್ದಾರೆ. 2012ರಲ್ಲಿ ಕಿವೀಸ್ ವಿರುದ್ಧ 58, 103, 51 ರನ್ ಗಳಿಸಿದ್ದರು.

2009: ಕಾನ್ಪುರ 2009ರಲ್ಲಿ ಕೊನೆಯ ಬಾರಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದ ಆತಿಥ್ಯವಹಿಸಿತ್ತು. ಆ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಇನಿಂಗ್ಸ್ ಹಾಗೂ 144 ರನ್‌ಗಳ ಅಂತರದಿಂದ ಮಣಿಸಿತ್ತು. ಭಾರತ ಕಾನ್ಪುರದಲ್ಲಿ ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಜಯ, 1ರಲ್ಲಿ ಡ್ರಾ ಸಾಧಿಸಿದೆ. 5 ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್‌ಗಳು 63 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಈಗ ತಂಡದಲ್ಲಿರುವ ಯಾವ ಸ್ಪಿನ್ನರ್ ಕೂಡ ಕಾನ್ಪುರ ಟೆಸ್ಟ್‌ನಲ್ಲಿ ಆಡಿಲ್ಲ.

ತಂಡಗಳು:  ಭಾರತ(ಸಂಭಾವ್ಯರು): ಎಂ. ವಿಜಯ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ,ಆರ್.ಅಶ್ವಿನ್, ವೃದ್ದಿಮಾನ್ ಸಹಾ(ವಿ.ಕೀಪರ್), ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಅಮಿತ್ ಮಿಶ್ರಾ.

ನ್ಯೂಝಿಲೆಂಡ್(ಸಂಭಾವ್ಯರು): ಟಾಮ್ ಲಾಥಮ್, ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಹೆನ್ರಿ ನಿಕೊಲ್ಸ್, ಬಿಜೆ ವ್ಯಾಟ್ಲಿಂಗ್(ವಿ.ಕೀ.), ಮಿಚೆಲ್ ಸ್ಯಾಂಟ್ನರ್, ಮಾರ್ಕ್ ಕ್ರೆಗ್, ಐಶ್ ಸೋಧಿ, ನೀಲ್ ವಾಗ್ನರ್/ಡೌಗ್ ಬ್ರಾಸ್‌ವೆಲ್, ಟ್ರೆಂಟ್ ಬೌಲ್ಟ್.

ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News