×
Ad

ಕೆಪಿಎಲ್: ಬೆಳಗಾವಿ ವಿರುದ್ಧ ಗರ್ಜಿಸಿದ ಹುಬ್ಬಳ್ಳಿ ಟೈಗರ್ಸ್‌

Update: 2016-09-22 23:40 IST

ಹುಬ್ಬಳ್ಳಿ, ಸೆ.22: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದಿಕ್ಷಾಂಶು ನೇಗಿ ಔಟಾಗದೆ ಬಾರಿಸಿದ 57 ರನ್ ಕೊಡುಗೆಯ ಸಹಾಯದಿಂದ ಆತಿಥೇಯ ಹುಬ್ಬಳ್ಳಿ ಟೈಗರ್ಸ್‌ ತಂಡ ಬೆಳಗಾವಿ ಪ್ಯಾಂಥರ್ಸ್‌ ವಿರುದ್ಧದ ಕೆಪಿಎಲ್ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.

ಇಲ್ಲಿನ ಕೆಎಸ್‌ಸಿಎ ರಾಜನಗರ ಸ್ಟೇಡಿಯಂನಲ್ಲಿ ಗುರುವಾರ ನಡೆದ ಕೆಪಿಎಲ್‌ನ 12ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ತಂಡ ನಾಯಕ ವಿನಯಕುಮಾರ್(77), ಮಾಯಾಂಕ್ ಅಗರವಾಲ್(42) ಹಾಗೂ ಕೆ. ಅಬ್ಬಾಸ್(40) ಅಮೂಲ್ಯ ಕಾಣಿಕೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.

ಗೆಲ್ಲಲು 178 ರನ್ ಗುರಿ ಪಡೆದ ಹುಬ್ಬಳ್ಳಿ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಾಗ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ದಾಂಡಿಗ ಮುಹಮ್ಮದ್ ತಾಹ(43 ರನ್, 18 ಎಸೆತ, 3 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ನೇಗಿ(57 ರನ್, 43 ಎಸೆತ, 3 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಆಟದ ನೆರವಿನಿಂದ ಹುಬ್ಬಳ್ಳಿ ತಂಡ ಗೆಲುವು ಸಾಧಿಸಿತು.

ಹುಬ್ಬಳ್ಳಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ ನೇಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಬೆಳಗಾವಿ ಪ್ಯಾಂಥರ್ಸ್‌: 20 ಓವರ್‌ಗಳಲ್ಲಿ 177/5

( ವಿನಯಕುಮಾರ್ 77, ಮಾಯಾಂಕ್ ಅಗರವಾಲ್ 42, ಕೆ. ಅಬ್ಬಾಸ್ 40, ಎಸ್.ಅರವಿಂದ್ 2-32)

ಹುಬ್ಬಳ್ಳಿ ಟೈಗರ್ಸ್‌: 19.5 ಓವರ್‌ಗಳಲ್ಲಿ 179/6

(ಡಿ.ನೇಗಿ ಔಟಾಗದೆ 57, ಮುಹಮ್ಮದ್ ತಾಹ 43, ಪ್ರವೀಣ್ ದುಬೆ 2-34)

ಪಂದ್ಯಶ್ರೇಷ್ಠ: ದಿಕ್ಷಾಂಶು ನೇಗಿ.

ಶಿವಮೊಗ್ಗಕ್ಕೆ ಶರಣಾದ ಮಂಗಳೂರು

ಹುಬ್ಬಳ್ಳಿ, ಸೆ.22: ಕೆಪಿಎಲ್‌ನ 13ನೆ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡ ನಮ್ಮ ಶಿವಮೊಗ್ಗ ತಂಡದ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಸೋತಿದೆ.

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಮಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 143 ರನ್ ಗಳಿಸಿತು. ಒಂದು ಹಂತದಲ್ಲಿ 99 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡ ಎಂ ನಿದೇಶ್(32) ಕೊಡುಗೆಯ ನೆರವಿನಿಂದ ಶಿವಮೊಗ್ಗಕ್ಕೆ 144 ರನ್ ಗುರಿ ನೀಡಲು ಸಫಲವಾಯಿತು.

 ಮಂಗಳೂರು ತಂಡಕ್ಕೆ ಸಿಎಂ ಗೌತಮ್(49 ರನ್, 45ಎಸೆತ, 6 ಬೌಂಡರಿ) ಹಾಗೂ ನಾಯಕ ಕರುಣ್ ನಾಯರ್(29 ರನ್) ಮೊದಲ ವಿಕೆಟ್‌ಗೆ 69 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ದಿಢೀರ್ ಕುಸಿತ ಕಂಡ ಮಂಗಳೂರು 143 ರನ್ ಗಳಿಸಲಷ್ಟೇ ಶಕ್ತವಾಯಿತು.

ಸುಲಭ ಸವಾಲು ಪಡೆದಿದ್ದ ಶಿವಮೊಗ್ಗ 17.5ನೆ ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಪವನ್ ದೇಶಪಾಂಡೆ(47 ರನ್, 30ಎ, 5 ಬೌಂ.2 ಸಿ.) ಹಾಗೂ ಸ್ಟುವರ್ಟ್ ಬಿನ್ನಿ(31)4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 75 ರನ್ ಸೇರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ಶಿವಮೊಗ್ಗದ ಸ್ಪಿನ್ ಬೌಲರ್ ಕೆಪಿ ಅಪ್ಪಣ್ಣ(2-17) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News